More

    ಜಾತಿಗಣತಿ ವರದಿ ತಕ್ಷಣ ಅನುಷ್ಠಾನಗೊಳಿಸಿ

    ದಾವಣಗೆರೆ : ರಾಜ್ಯ ಸರ್ಕಾರ ತಕ್ಷಣ ಕಾಂತರಾಜ ಆಯೋಗದ ಜಾತಿಗಣತಿ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು ಎಂದು ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಈಶ್ವರಾನಂದಪುರಿ ಶ್ರೀಗಳು ಒತ್ತಾಯಿಸಿದರು.
     ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಘರ್ಜನೆ ಸಂಘಟನೆಯಿಂದ ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
     ಜಾತಿಗಣತಿ ವರದಿ ಸರ್ಕಾರಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ, ಸರ್ಕಾರ ಅದನ್ನು ಸ್ವೀಕರಿಸಿಯೂ ಇಲ್ಲ. ಹೀಗಿರುವಾಗ ಅದರಲ್ಲಿನ ಲೋಪ ಕಂಡುಹಿಡಿಯಲು ಹೇಗೆ ಸಾಧ್ಯ? ಸರ್ಕಾರ ವರದಿ ಸ್ವೀಕರಿಸಿದ ನಂತರ ಅದರಲ್ಲಿನ ಲೋಪದೋಷ  ಚರ್ಚಿಸೋಣ ಎಂದು ಹೇಳಿದರು.
     ಜಾತಿಗಣತಿ ವಿರೋಧಿಸಿ 67 ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಷ್ಠಾನಗೊಳ್ಳದ ವರದಿಯಲ್ಲಿ ಲೋಪದೋಷವಿದೆ ಎಂದು ಮಠಾಧೀಶರು ಹಾಗೂ ಶಾಸಕರು ವಿರೋಧಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
     ಕಾಂತರಾಜ ಆಯೋಗ ಜಾತಿಗಣತಿ ಮಾತ್ರವಲ್ಲದೇ, ಸಮಾಜದ ಎಲ್ಲ ಸಮುದಾಯಗಳ ಶಿಕ್ಷಣ, ಉದ್ಯೋಗ, ಅಧಿಕಾರ ಮೊದಲಾದ 52 ಅಂಶಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿದ್ದಾರೆ. ಜಾತಿಗಣತಿ ವಿರೋಧಿಸಿದ ಎಲ್ಲ ಶಾಸಕರನ್ನು ಹಿಂದುಳಿದ ವರ್ಗದ ಸಮುದಾಯಗಳು ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ತಿಳಿಸಿದರು.
     ಸಿದ್ದರಾಮಯ್ಯ ಮುಖ ನೋಡಿ ಜನತೆ ನಿಮಗೆ ಮತ ಹಾಕಿದ್ದಾರೆ. ವರದಿ ಪರ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಶಾಸಕರು ಗಟ್ಟಿ ಧ್ವನಿ ಎತ್ತುವ ಮೂಲಕ ಮುಖ್ಯಮಂತ್ರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.
     ಕಾಂತರಾಜ ವರದಿ ಅನುಷ್ಠಾನಗೊಳಿಸುವಂತೆ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಹಿಂದುಳಿದ ಹಾಗೂ ಶೋಷಿತ ವರ್ಗದ ಮಠಾಧೀಶರು ಜ.5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ  ಎಂದು ತಿಳಿಸಿದರು.
     ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಹಾಗೂ ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ನಿಂದ ದೇಶದಲ್ಲಿಂದು ಜಾತ್ಯತೀತ ತತ್ವಕ್ಕೆ ಅಪಾಯ ಉಂಟಾಗಿದೆ. ಅವರು ದೇಶವನ್ನು ಹಿಂದು ರಾಷ್ಟ್ರ ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
     ದೇಶದಲ್ಲಿ ಸಂವಿಧಾನದ ಕಾರಣ ಸಮಾನತೆ ಸಾಧಿಸಲು ಸಾಧ್ಯವಾಗಿದ್ದು, ಎಲ್ಲರಿಗೂ ಸಂವಿಧಾನವೇ ಮೂಲ ಧರ್ಮ ಆಗಬೇಕು. ಆಗ ಮಾತ್ರ ಆತ್ಮವಿಶ್ವಾಸದಿಂದ ತಲೆಎತ್ತಿ ನಮ್ಮ ಹಕ್ಕು ಪಡೆದುಕೊಳ್ಳಲು ಸಾಧ್ಯ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಧರ್ಮವನ್ನು ತೋರಿಸಿ ಜನರನ್ನು ಭಾವುಕರನ್ನಾಗಿಸಿ ನಿಜವಾದ ಸಮಸ್ಯೆ ಮರೆಯುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
     ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ಜನ್ಮಸ್ಥಳದಲ್ಲಿ ನೂರು ಎಕರೆ ಪ್ರದೇಶದಲ್ಲಿ ಸುಮಾರು 262 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಜ. 17ರಂದು ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
     ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ಪಕ್ಷಗಳು ಜಾತಿ ಹಿಡಿದು ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಮುದಾಯಗಳ ಹಿತ ಕಾಯುತ್ತಿದ್ದಾರೆ ಎಂದರು.
     ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾತನಾಡಿದರು.
     ಚಿತ್ರದುರ್ಗದ ಕೃಷ್ಣಯಾದವನಂದ ಸ್ವಾಮೀಜಿ, ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಸರ್ದಾರ್ ಸೆವಾಲಾಲ್ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಪ್ರತಿಮೆ ದಾನಿ ರಾಜಶೇಖರ್ ದೊಡ್ಡಣ್ಣ, ಮಾಜಿ ಶಾಸಕ ಎಸ್.ರಾಮಪ್ಪ, ಸಿಎಂ ಆಪ್ತ ಕಾರ್ಯದರ್ಶಿ ವಿಜಯಕುಮಾರ್, ಬೆಂಗಳೂರು ಮಾಜಿ ಮೇಯರ್ ರಾಮಚಂದ್ರಪ್ಪ, ಸಮಾಜದ ಗುರುಗಳಾದ ಶಿವಕುಮಾರ್ ಒಡೆಯರ್, ಇನ್ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಜಿ.ಸಿ. ನಿಂಗಪ್ಪ, ಡಿ.ಬಸವರಾಜ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts