More

    ಲಿಂಗಾಯತವೆಂಬುದು ಜಾತಿಯಲ್ಲ, ಅದೊಂದು ತತ್ವ ಸಿದ್ಧಾಂತ

    ದಾವಣಗೆರೆ : ಲಿಂಗಾಯತ ಎನ್ನುವುದು ಒಂದು ಜಾತಿ ಅಲ್ಲ. ಅದೊಂದು ತತ್ವ ಹಾಗೂ ಸಿದ್ಧಾಂತ. ಪ್ರತಿಯೊಬ್ಬರೂ ಅದಕ್ಕೆ ಅನುಗುಣವಾಗಿ ನಡೆಯುವುದು ಮುಖ್ಯ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
     ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು ಶರಣ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ನಾವು ಲಿಂಗಾಯತ ಧರ್ಮೀಯರು, ಬಸವತತ್ವ ಅನುಯಾಯಿಗಳು, ನಮ್ಮದು ವಿಶ್ವಧರ್ಮ ಎಂದು ಹೇಳುತ್ತೇವೆ. ಆದರೆ, ಇದು ಆಚರಣೆಯಲ್ಲಿ ಇಲ್ಲ ಎಂದರೆ ತತ್ವಗಳಿಗೆ ಯಾವ ಬೆಲೆಯೂ ಇಲ್ಲ. ಶರಣ ತತ್ವ ಅಪ್ಪಿಕೊಂಡವರು ಇಷ್ಟಲಿಂಗ ಪೂಜೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
     ಇಂದು ಒಂದು ಕಡೆ ವೈದಿಕ ಪರಂಪರೆ ಅಪ್ಪಿಕೊಂಡಿದ್ದೇವೆ. ಇನ್ನೊಂದು ಕಡೆ ಬಸವ ಪರಂಪರೆ ಬೇಕು ಎಂದು ಹೇಳುತ್ತಿದ್ದೇವೆ. ಯಾರು ಬಸವ ಪರಂಪರೆ ಒಪ್ಪಿಕೊಳ್ಳುತ್ತಾರೋ ಅವರು ವೈದಿಕ ಪರಂಪರೆಯಿಂದ ಸಂಪೂರ್ಣ ದೂರ ಇರಬೇಕು. ಅದೂ ಇರಲಿ ಇದೂ ಇರಲಿ ಎಂದರೆ ಅದನ್ನು ಶರಣ ತತ್ವ ಒಪ್ಪುವುದಿಲ್ಲ ಎಂದರು.
     ನಡೆ-ನುಡಿ ಒಂದಾಗದಿದ್ದರೆ ಬಸವ ತತ್ವದಿಂದ ಸಂಪೂರ್ಣ ದೂರ ಇದ್ದೇವೆ ಎಂದು ಅರ್ಥ. ದ್ವಂದ್ವ ಮನೋಭಾವ ಇದ್ದಾಗ ಒಂದು ತತ್ವಕ್ಕೆ ಬದ್ಧರಾಗಿರಲು ಸಾಧ್ಯವಿಲ್ಲ. ಜನ ಮೆಚ್ಚಿ ನಡೆಯುವುದಕ್ಕಿಂತ ಮನ ಮೆಚ್ಚಿ ನಡೆಯುವುದು ಬಹಳ ಮುಖ್ಯ. ಮನ ಮೆಚ್ಚಿ ನಡೆಯುವ ಕಾರ್ಯಗಳನ್ನು ಮಾಡಿದಾಗ ಬಸವ ತತ್ವವನ್ನು ಮತ್ತೆ ಸಮಾಜದಲ್ಲಿ ಜಾರಿಗೆ ತರಲು ಸಾಧ್ಯ ಎಂದು ಪ್ರತಿಪಾದಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts