More

    ನುಡಿದಂತೆ ನಡೆದಿದ್ದೇವೆ, ಸರ್ಕಾರದ ಪರವಾಗಿರಿ

    ದಾವಣಗೆರೆ : ಚುನಾವಣೆ ಪೂರ್ವದಲ್ಲಿ ನೀಡಲಾಗಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ಜನರು ಸರ್ಕಾರದ ಪರವಾಗಿರಬೇಕು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
     ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಗ್ರಾಮ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
     ಸರ್ಕಾರ ನಿಗದಿತ ಸಮಯದಲ್ಲಿಯೆ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಿದೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳ ಆರ್ಥಿಕ ಬಲ ಹೆಚ್ಚಾಗಿದ್ದು ಜೀವನ ಮಟ್ಟ ಸುಧಾರಣೆಯಾಗಿದೆ. ನಿರ್ವಹಣೆಯೂ ಸುಲಭವಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳ ಅನುಕೂಲವಾಗಿದೆ ಎಂದರು.
     ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ, ಮತ್ತು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲಿಗೆ ನೀಡಲಾಗುವ ಹಣವು ಆಧಾರ್ ಜೋಡಣೆ, ಪಡಿತರ ಚೀಟಿಯ ತಿದ್ದುಪಡಿ, ಆಧಾರ್ ತಿದ್ದುಪಡಿಯ ಕಾರಣದಿಂದ ಬಾರದೆ ಇರಬಹುದು. ಅಧಿಕಾರಿಗಳು ಎಲ್ಲ ಅಡೆತಡೆಗಳನ್ನು ನಿವಾರಣೆ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವರು. ಯಾವುದೇ ಆತಂಕ ಬೇಡ ಎಂದು ತಿಳಿಸಿದರು.
     ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಸರ್ಕಾರ ಜನರ, ಅದರಲ್ಲಿಯೂ ಮಹಿಳೆಯರ ಕಲ್ಯಾಣಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಪ್ರತಿ ಕುಟುಂಬದವರೂ ಇದರ ಫಲಾನುಭವಿಗಳಾಗಿದ್ದು ಕೆಲವರು ಎಲ್ಲ ಯೋಜನೆಗಳ ಲಾಭ ಪಡೆದಿದ್ದಾರೆ ಎಂದು ಹೇಳಿದರು.
     ಬಡತನ ನಿರ್ಮೂಲನೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲೆತ್ತುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
     ಫಲಾನುಭವಿ ಪುಷ್ಪಾ ಮಾತನಾಡಿ, ಶಕ್ತಿ ಯೋಜನೆಯಿಂದ ನನಗೆ ಬಹಳ ಅನುಕೂಲವಾಗಿದೆ. ಉಚಿತ ಪ್ರಯಾಣ ಸೌಲಭ್ಯ ಇರುವುದರಿಂದ ಹಣ ಕೊಡುವಂತೆ ಕುಟುಂಬದವರನ್ನು ಕೇಳುವ ಅಗತ್ಯವಿಲ್ಲ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಅವಕಾಶವಾಗಿದೆ ಎಂದು ಹೇಳಿದರು.
     ‘ಗೃಹಲಕ್ಷ್ಮೀ’ ಯೋಜನೆಯ ಫಲಾನುಭವಿ ರೇಖಾ ಮಾತನಾಡಿ, ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂ. ಸಿಗುವುದರಿಂದ ಬಡ ಹೆಣ್ಣು ಮಕ್ಕಳಿಗೆ ಬಹಳ ಅನುಕೂಲವಾಗಿದೆ. ನನ್ನಂತೆ ಟೈಲರಿಂಗ್ ಮಾಡುವವರು ವೃತ್ತಿಗೆ ಬೇಕಾದ ವಸ್ತುಗಳ ಖರೀದಿಗೆ ಬೇರೆಯವರನ್ನು ಹಣ ಕೇಳುವ ಪ್ರಮೇಯವಿಲ್ಲ ಎಂದು ಅಭಿಪ್ರಾಯಪಟ್ಟರು.
     ಗೃಹಜ್ಯೋತಿ ಯೋಜನೆ ಬಗ್ಗೆ ಸುನಂದಾ ಎಂಬುವರು ಮಾತನಾಡಿ, ಉಚಿತವಾಗಿ ವಿದ್ಯುತ್ ನೀಡಿದರೂ ನಿರಂತರವಾಗಿ ಕರೆಂಟ್ ಇರುತ್ತದೆ. ಇದರಿಂದ ಗ್ರಾಮೀಣ ಭಾಗದ ಓದುವ ಮಕ್ಕಳಿಗೆ ಅನುಕೂಲವಾಗಿದೆ ಎಂದರು.
     ಉಪ ವಿಭಾಗಾಧಿಕಾರಿ ದುರ್ಗಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ತಾ.ಪಂ. ಸಹಾಯಕ ನಿರ್ದೇಶಕ ಅಭಿಜಿತ್, ಸಿಡಿಪಿಒ ಅಭಿಕುಮಾರ್, ಪಿಡಿಒ ಲಕ್ಷ್ಮೀದೇವಿ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts