More

    ವಿಕ್ರಮ್, ಪ್ರಜ್ಞಾನ್ ಸಂಪರ್ಕಕ್ಕೆ ಮುಂದುವರಿದ ಪ್ರಯತ್ನ

    ದಾವಣಗೆರೆ : ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಅನ್ನು ಸಂಪರ್ಕ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಇಸ್ರೋ ಸಹ ನಿರ್ದೇಶಕ ಡಾ. ಬಿ.ಎಚ್.ಎಂ. ದಾರುಕೇಶ್ ಹೇಳಿದರು.
     ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಶನಿವಾರ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ದಿನಗಳಿಂದಲೂ ಪ್ರಯತ್ನಗಳು ನಡೆಯುತ್ತಿದ್ದು, ಚಂದ್ರನಲ್ಲಿ ಸಿಕ್ಕ ವಸ್ತುಗಳು, ವಾತಾವರಣದ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
     ಚಂದ್ರನ ಮೇಲ್ಮೈನಲ್ಲಿ ಮೈನಸ್ 200 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲೂ ಎಲೆಕ್ಟ್ರಾನಿಕ್ ಮಾಡ್ಯೂಲ್‌ಗಳು ಕೆಲಸ ಮಾಡಬಹುದು. ಆದರೆ ಅದಕ್ಕಿಂತಲೂ ಹೆಚ್ಚಿನ ಉಷ್ಣಾಂಶವನ್ನು ಉಪಕರಣಗಳು ತಡೆದುಕೊಂಡರೆ ಅದೊಂದು ವಿಸ್ಮಯವೇ ಸರಿ ಎಂದರು.
     ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ 10 ಸೆಂಟಿಮೀಟರ್ ಆಳಕ್ಕೆ ಒಂದು ಗುಂಡಿಯನ್ನು ತೆಗೆದಿದ್ದು, ಅಲ್ಲಿ ಎಷ್ಟು ಉಷ್ಣತೆ ಇದೆ ಎಂದು ಪತ್ತೆ ಹಚ್ಚುತ್ತಿದೆ. ಮೈನಸ್ 10 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಪ್ಲಾಸ್ಮಾ ಸ್ಥಿತಿಯಂತಹ ವಸ್ತು (ಮಟೀರಿಯಲ್) ಇದೆ. ಚಂದ್ರನಲ್ಲಿ ಕ್ಯಾಲ್ಷಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್‌ಗಳ ಜತೆಗೆ ಸಲ್ಫರ್ ಸಿಕ್ಕಿರುವುದು ವಿಶೇಷ ಎಂದು ಹೇಳಿದರು.
     ಸೂರ್ಯನನ್ನು ಕುರಿತು ದಿನದ 24 ಗಂಟೆಯೂ ಅಧ್ಯಯನ ಮಾಡುವ ಉದ್ದೇಶದಿಂದ ಆದಿತ್ಯ ಎಲ್1 ನೌಕೆಯನ್ನು ಕಳುಹಿಸಲಾಗಿದೆ. ಸೂರ್ಯನ ಹೊರ ಮೇಲ್ಮೈನಲ್ಲಿ 6 ಸಾವಿರ ಕೆಲ್ವಿನ್ ಉಷ್ಣತೆ ಇದ್ದು, ಒಳಭಾಗದಲ್ಲಿ 10 ಲಕ್ಷ ಕೆಲ್ವಿನ್‌ವರೆಗೂ ಉಷ್ಣತೆ ಇರುವ ಸಾಧ್ಯತೆ ಇದೆ ಎಂದರು.
     ಸೂರ್ಯನು ಉಗುಳುವ ಕಾಂತೀಯ ಹಾಗೂ ಪ್ಲಾಸ್ಮಾ ಮುನ್ಸೂಚನೆಯನ್ನು ಕಂಡುಕೊಳ್ಳಲು ಅಧ್ಯಯನದಿಂದ ಮಾತ್ರ ಸಾಧ್ಯ. ಈ ಅಧ್ಯಯನವು ನಮ್ಮ ಉಪಗ್ರಹಗಳನ್ನು ಸುರಕ್ಷಿತವಾಗಿಡಲು ನೆರವಾಗಲಿದೆ. ಅಲ್ಟ್ರಾವೈಲೆಟ್ ಕಿರಣಗಳು ಸೂರ್ಯನ ಯಾವ ಭಾಗದಿಂದ ಎಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
     ಇಸ್ರೋ ತಂತ್ರಜ್ಞರು ಹಾಗೂ ವಿಜ್ಞಾನಿಗಳನ್ನು ಭಾರತ ಸರ್ಕಾರ ಚೆನ್ನಾಗಿಯೇ ನೋಡಿಕೊಂಡಿದೆ. ಸಂಬಳ ನೀಡಲಿಲ್ಲ ಎನ್ನುವುದು ಸುಳ್ಳು ಎಂದು ದಾರುಕೇಶ್ ಸ್ಪಷ್ಟಪಡಿಸಿದರು. ಈ ಬಗ್ಗೆ ಪಿಐಬಿಯಿಂದ ಫ್ಯಾಕ್ಟೃ್ ಚೆಕ್ ವರದಿ ಕೂಡ ಬಿಡುಗಡೆ ಮಾಡಲಾಗಿದೆ. ಕೇಂದ್ರದಲ್ಲಿದ್ದ ಎಲ್ಲ ಸರ್ಕಾರಗಳೂ ಹೊಸ ಪ್ರಯೋಗಗಳನ್ನು ಮಾಡಲು ಇಸ್ರೋಗೆ ಪ್ರೋತ್ಸಾಹ ನೀಡಿ, ಹಣಕಾಸನ್ನೂ ಒದಗಿಸಿವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts