More

    ಕರೊನಾಕ್ಕೆ ಔಷಧ ಸಿಕ್ಕರೂ ಬೇಕು ದೈವೀಭಕ್ತಿ

    ದಾವಣಗೆರೆ: ಕರೊನಾ ನಿರ್ಮೂಲನೆಗೆ ಏನೇ ಔಷಧ ಕಂಡುಹಿಡಿದರೂ ದೇವರ ಸ್ಮರಣೆ, ದೈವೀಭಕ್ತಿ ಎಲ್ಲರಲ್ಲೂ ಬೇಕು ಎಂದು ಕೂಡಲಿ ಕ್ಷೇತ್ರದ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

    ಜಯದೇವ ವೃತ್ತದ ಶಂಕರಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರುದ್ರಹೋಮದ ಪೂರ್ಣಾಹುತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಧರ್ಮ ಸಂಸ್ಥಾಪನೆಗಾಗಿ ದುರ್ಗಾ ಮಾತೆಯು ಶುಂಭ-ನಿಶುಂಭ, ಮಹಿಷಾಸುರ ಸೇರಿದಂತೆ ಅನೇಕ ರಾಕ್ಷಸರ ಸಂಹಾರ ಮಾಡಿದ್ದಾಳೆ. ಹೀಗಾಗಿ ಕಣ್ಣಿಗೆ ಕಾಣದ ಕರೊನಾ ಮಹಾಮಾರಿ ವೈರಸ್ ನಿಗ್ರಹ ಕಷ್ಟವಲ್ಲ ಎಂದರು.

    ನಿತ್ಯವೂ ಭಗವಂತನ ಸ್ಮರಣೆ ಮಾಡುವುದರಿಂದ ನಮಗೆ ಸುಖ, ನೆಮ್ಮದಿ, ಆರೋಗ್ಯ ಸಿಗಲಿದೆ. ದೇವರನ್ನು ಯಾರೂ ಮರೆಯಕೂಡದು. ಭಗವಂತನ ಅನುಗ್ರಹವಿಲ್ಲದೆ ನಮ್ಮ ಸಂಕಷ್ಟಗಳು ನೀಗದು. ದೈವಭಕ್ತಿ ರೂಢಿಸಿಕೊಂಡು ಮಾನವ ಜನ್ಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದೇವಿ ಅಥವಾ ದೇವರ ಪಾರಾಯಣ, ಮಹಾತ್ಮೆ ಕೇಳಿದರೂ ಸಾಕು ತಾಪ, ಪಾಪ ನಿವಾರಣೆಯಾಗಲಿದೆ ಎಂದು ಹೇಳಿದರು.

    ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿ ಪಾರಾಯಣ, ರಾಜರಾಜೇಶ್ವರಿ, ಶ್ರೀ ಚಕ್ರಾರಾಧನೆ ಮಾಡುವ ವಿಶೇಷಗಳಿವೆ. ಉಳಿದ ದಿನಗಳಿಗಿಂತಲೂ ಶರನ್ನವರಾತ್ರಿಯ ಅವಧಿಯಲ್ಲಿ ಮಾಡುವ ದುರ್ಗಾರಾಧನೆಯಿಂದ ಹೆಚ್ಚು ಪುಣ್ಯ ಲಭಿಸಲಿದೆ. ಪ್ರತಿ ದಿನದ ಪರ್ವ ಕಾಲದಲ್ಲೂ ಒಂದು ಬಾರಿ ಜಪ ಮಾಡಿದರೆ ನೂರು ಪಟ್ಟು ಲಾಭ ಸಿದ್ಧಿಸಲಿದೆ, ಜಗನ್ಮಾತೆ ಕೂಡ ಸಂತುಷ್ಟಿಯಾಗುವಳು ಎಂದು ವಿವರಿಸಿದರು.

    ದೇವಸ್ಥಾನ, ಗುರುಗಳಲ್ಲಿ ಹೋದಾಗ ಭಕ್ತರು ಆನೆ(ಆರೋಗ್ಯ-ನೆಮ್ಮದಿ)ಯನ್ನು ಕೇಳಬೇಕು. ಪ್ರತಿಯೊಬ್ಬರಲ್ಲೂ ದೇವರು ಇದ್ದಾನೆ. ಅವರನ್ನು ತಿಳಿಯುವುದೇ ನಮ್ಮ ಗುರಿಯಾಗಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕೂಡಲಿ ಮಠದ ಆಡಳಿತಾಧಿಕಾರಿ ಕೇಶವಪ್ರಸಾದ್, ಪುರೋಹಿತರಾದ ಪವನ್‌ಕುಮಾರ್ ಕುಲಕರ್ಣಿ, ಅಜಯ್‌ಭಟ್, ಗಣೇಶ ಭಟ್, ಅಮೋಘವರ್ಷ, ಅನಿಲ್ ಜೋಯ್ಸ, ರಂಗನಾಥ ನಾಡಿಗೇರ್, ನರಹರಿ ನಾಡಿಗೇರ್, ಗಂಗಾಧರ ನಾಡಿಗೇರ್, ನಾರಾಯಣ ಜೋಷಿ ಹಾಗೂ ಭಕ್ತರಾದ ಮಾಲತೇಶ ನಾಡಿಗೇರ್, ಹನುಮಂತರಾವ್ ಕಟ್ಟಿ, ಎಂ.ಜಿ.ಶ್ರೀಕಾಂತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts