More

    ಸದಾಶಿವ ಆಯೋಗದ ವರದಿ ಮಂಡನೆಗೆ ವಿರೋಧ

    ದಾವಣಗೆರೆ : ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯು ಮಂಡನೆಯಾಗದಂತೆ ತಡೆಯಲು ಲಂಬಾಣಿ, ಭೋವಿ ಮತ್ತು ಕೊರಚ-ಕೊರಮ ಸಮಾಜದವರು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಬೇಕು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
     ನಗರದ ರೋಟರಿ ಬಾಲಭವನದ ನಾಗಮ್ಮ ಕೇಶವಮೂರ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವಿಭಾಗೀಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
     ನಮ್ಮ ಮೂರು ಸಮುದಾಯ ಸೇರಿ ನಾನಾ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಡಬೇಕೆನ್ನುವುದು ಮೂಲ ಉದ್ದೇಶವಾಗಿದೆ. ಆದ್ದರಿಂದ ನಾವು ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ ಎಂದರು.
     ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡಿಸುವುದಾಗಿ ಸಚಿವ ಕೆ.ಎಚ್. ಮುನಿಯಪ್ಪ ಮತ್ತಿತರರು ಹೇಳುತ್ತಿರುವುದನ್ನು ನೋಡಿದರೆ ಆತಂಕ ಎದುರಾಗಿದೆ. ಆದ್ದರಿಂದ ಪಕ್ಷ ಭೇದ ಮರೆತು ಹೋರಾಟ ಮಾಡಬೇಕು. ಅದಕ್ಕೂ ಬಗ್ಗದಿದ್ದರೆ, ಹಿಂದಿನ ಬಿಜೆಪಿ ಸರ್ಕಾರಕ್ಕೆ ಕಲಿಸಿದ ಪಾಠವನ್ನು ಕಾಂಗ್ರೆಸ್ ಸರ್ಕಾರಕ್ಕೂ ಕಲಿಸೋಣ ಎಂದು ತಿಳಿಸಿದರು.
     ವಕೀಲ ಎನ್. ಅನಂತ ನಾಯ್ಕ ಮಾತನಾಡಿ, ಹಿಂದಿನ ಸರ್ಕಾರ ಈ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ ಕಾರಣ ಕಳೆದ ಚುನಾವಣೆಯಲ್ಲಿ 42 ಕ್ಷೇತ್ರಗಳಲ್ಲಿ ಬಿಜೆಪಿಯವರು ನಮ್ಮ ಸಮುದಾಯಗಳಿಂದ ಸೋಲುಂಡಿದ್ದಾರೆ. ಅದೇ ತಪ್ಪನ್ನು ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾಗಿದೆ. ಆದ್ದರಿಂದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋಣ ಎಂದು ಸಲಹೆ ನೀಡಿದರು.
     ಒಕ್ಕೂಟದ ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಈ ವರದಿ ಮಂಡನೆಗೆ ಬಂದರೆ, ನಮ್ಮ ಪರವಾಗಿ ಧ್ವನಿ ಎತ್ತುವಂತೆ ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡೋಣ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ವರದಿ ಮಂಡಿಸದಂತೆ ಒತ್ತಡ ಹೇರೋಣ ಎಂದರು.
     ಒಕ್ಕೂಟದ ಮುಖಂಡರಾದ ಡಾ.ವೈ. ರಾಮಪ್ಪ, ಎನ್. ಜಯದೇವ ನಾಯ್ಕ, ಜಯಣ್ಣ, ಶ್ರೀನಿವಾಸ್, ನಂಜಾ ನಾಯ್ಕ, ಕುಬೇರ್ ನಾಯ್ಕ, ಲಕ್ಷ್ಮಣ ರಾಮಾವತ್, ಕೆ.ಆರ್. ಮಲ್ಲೇಶ್ ನಾಯ್ಕ, ಚಿನ್ನಸಮುದ್ರ ಶೇಖರ ನಾಯ್ಕ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts