More

    ಸಿಡಿದೆದ್ದ ವೈದ್ಯ ವಿದ್ಯಾರ್ಥಿಗಳು

    ದಾವಣಗೆರೆ: 16 ತಿಂಗಳ ಬಾಕಿ ಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ ಸರ್ಕಾರಿ ಕೋಟಾದಡಿಯ ಹೌಸ್ ಸರ್ಜನ್‌ಗಳು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

    ಗೌನು ಧರಿಸಿ, ಸ್ಟೆತಸ್ಕೋಪ್, ಫ್ಲೆಕಾರ್ಡ್ ಹಿಡಿದ ವಿದ್ಯಾರ್ಥಿಗಳು, ಜಯದೇವ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಸ್ಥಳಕ್ಕೆ ಬಂದ ಡಿಸಿ ಮಹಾಂತೇಶ್ ಬೀಳಗಿ ಮುಷ್ಕರ ನಿಲ್ಲಿಸುವಂತೆ ಎಚ್ಚರಿಸಿದರೂ, ಬೆದರಿಕೆಗೆ ಜಗ್ಗುವುದಿಲ್ಲವೆಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

    ಮೇಲೆ ಬಿಳಿ ಬಟ್ಟೆ ಒಳಗೆ ಖಾಲಿ ಹೊಟ್ಟೆ, ವೈದ್ಯೋ ನಾರಾಯಣೋ ಹರಿ ವೈದ್ಯರ ಜೇಬಿಗೆ ಕತ್ತರಿ, ಡಿಎಂಇಗೆ ಚೆಲ್ಲಾಟ ವೈದ್ಯರಿಗೆ ಪ್ರಾಣ ಸಂಕಟ, ಸರ್ಕಾರದ ಸಹವಾಸ ವೇತನವಿಲ್ಲದೇ ವನವಾಸ ಮೊದಲಾದ ಘೋಷಣೆಗಳನ್ನು ಕೂಗಿದರು.

    ಮೂರು ಬಾರಿ ಸಿಎಂ, ಅನೇಕ ಸಲ ವೈದ್ಯಕೀಯ ಶಿಕ್ಷಣ ಸಚಿವರನ್ನು ಕಂಡಿದ್ದೇವೆ. 30ಕ್ಕೂ ಹೆಚ್ಚು ಬಾರಿ ವಿಧಾನಸೌಧ ಮೆಟ್ಟಿಲು ಹತ್ತಿದ್ದೇವೆ. ಸಮಸ್ಯೆ ಬಗೆಹರಿದಿಲ್ಲ. ವಿಧಾನಸಭೆಯಲ್ಲಿ ಚರ್ಚೆಯಾಗಿ ತಿಂಗಳಾದರೂ ಶಿಷ್ಯವೇತನ ವಿಚಾರದಲ್ಲಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಕಿಡಿ ಕಾರಿದರು.

    ಪ್ರತಿಭಟನೆ ನಡೆಸಿದರೆ ಲೈಸೆನ್ಸ್ ರದ್ದುಪಡಿಸುವುದಾಗಿ ಜಿಲ್ಲೆಯ ಅಧಿಕಾರಿಗಳು ಹೆದರಿಸುತ್ತಾರೆ. ಶಿಷ್ಯವೇತನ ನಮ್ಮ ಹಕ್ಕು. ಅದನ್ನು ಕೇಳುವುದೇ ತಪ್ಪಾ? ಕೋವಿಡ್ ರೋಗಿಗಳ ಚಿಕಿತ್ಸೆ, ತುರ್ತು ಚಿಕಿತ್ಸೆ ಹೊರತಾದ ಸೇವೆಯನ್ನು ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ಮಣಿಯದಿದ್ದರೆ ಎಲ್ಲಾ ವೈದ್ಯಕೀಯ ಸೇವೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ವೈದ್ಯ ವಿದ್ಯಾರ್ಥಿಗಳಾದ ಡಾ.ಎಸ್.ಹಿತಾ, ಡಾ.ಆರ್.ನಿಧಿ, ಡಾ.ಎಲ್.ಹರೀಶ್, ಡಾ.ರಾಹುಲ್, ಡಾ.ಮೇಘನಾ, ಡಾ.ಸುಧಾಕರ್, ಡಾ.ಅನಿರುದ್ಧ್, ಡಾ.ರೋಹಿತ್, ಡಾ ಭರತ್, ಡಾ.ಪರಮೇಶ್, ಡಾ.ಪ್ರೀತಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts