More

    ಬದುಕಿನ ಆನಂದಕ್ಕೆ ಉಪದೇಶಗಳು ಪೂರಕ

    ದಾವಣಗೆರೆ : ಗೌತಮ ಬುದ್ಧನ ಉಪದೇಶಗಳನ್ನು ಅನುಸರಿಸಿದರೆ ಬದುಕನ್ನು ಆನಂದಮಯವಾಗಿಸಬಹುದು ಎಂದು ಕರುಣಾ ಜೀವಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.
     ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಐಕ್ಯೂಎಸಿ ಸಾಂಸ್ಕೃತಿಕ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ‘ಬುದ್ಧ ಪೂರ್ಣಿಮಾ – ದುಃಖದಿಂದ ಪರಮಾನಂದದ ಕಡೆಗೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಜಗತ್ತಿಗೆ ಬುದ್ಧ ನೀಡಿದ ಕೊಡುಗೆ ಅನನ್ಯ. ದುಃಖ, ಅದರ ಕಾರಣ, ಮತ್ತು ನಿವಾರಣೆಯ ಮಾರ್ಗಗಳ ಬಗ್ಗೆ ಗೌತಮ ಬುದ್ಧ ಬೋಧಿಸಿದರು. ಸರಿಯಾದ ತಿಳಿವಳಿಕೆ, ಯೋಚನೆ, ಮಾತು, ಕ್ರಮ, ಜೀವನೋಪಾಯ, ಪ್ರಯತ್ನ, ಜಾಗೃತಿ ಮತ್ತು ಧ್ಯಾನದ ಕುರಿತು ತಿಳಿಸಿದ್ದಾರೆ. ಹತ್ಯೆ, ಕಳ್ಳತನ ಮಾಡದಿರುವುದು, ಅನೈತಿಕ ಸಂಬಂಧವನ್ನು ಹೊಂದದೆ ಇರುವುದು. ಸುಳ್ಳು, ಚಾಡಿ ಹೇಳದೆ ಇರುವುದು. ಮದ್ಯ ಸೇವಿಸದೆ ಇರುವ ಬಗ್ಗೆ ಅರಿವು ಮೂಡಿಸಿದ್ದಾಗಿ ತಿಳಿಸಿದರು.
     ಆಸೆಯನ್ನು ಹೋಗಲಾಡಿಸಬೇಕೆಂದರೆ ಮನಸ್ಸು, ಮಾತು, ನಡತೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಸ್ವಾರ್ಥದ ಮೇಲೆ ಆಸೆಯಿಡದೆ, ಪರೋಪಕಾರದಲ್ಲಿ ಗಮನವಿಡಬೇಕು. ಇತರರಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕು. ಸುಳ್ಳಾಡಬಾರದು, ಚಾಡಿ ಹೇಳಬಾರದು. ಯಾವಾಗಲೂ ನಿಜವನ್ನೆ ಹೇಳುತ್ತ ದಯಾವಂತನಾಗಿರಬೇಕು. ದುರ್ಗುಣಗಳನ್ನು ಹೋಗಲಾಡಿಸಬೇಕು. ಸದ್ಗುಣಗಳನ್ನು ಕಾಪಾಡಿಕೊಳ್ಳಬೇಕು ಎಂದು ಬುದ್ಧನ ಸಂದೇಶಗಳನ್ನು ವಿವರಿಸಿದರು.
     ಒಟ್ಟಿನಲ್ಲಿ ಮನಸ್ಸನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಕೆಡುಕನ್ನು ಯೋಚಿಸಬಾರದು. ಈ ರೀತಿ ನಡೆದರೆ ಆಸೆ ನಾಶವಾಗುತ್ತದೆ, ದುಃಖ ಮಾಯವಾಗುತ್ತದೆ ಎಂದು ತಿಳಿಸಿದರು.
     ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಮಾತನಾಡಿ, ಬುದ್ಧ 38 ಮಂಗಳಕರವಾದ ಸೂಕ್ತಿಗಳನ್ನು ಕೊಟ್ಟಿದ್ದಾರೆ. ಮೂರ್ಖರ ಸಂಗವನ್ನು ಮಾಡಬಾರದು. ಜ್ಞಾನಿಗಳ ಸಂಗವನ್ನು ಮಾಡಬೇಕು ಎಂದು ಹೇಳಿದ್ದಾರೆ. ಇಂತಹ ಸೂಕ್ತಿಗಳನ್ನು ಅಳವಡಿಸಿಕೊಂಡರೆ ಪರಮಾನಂದದ ಕಡೆಗೆ ಹೋಗಬಹುದು. ಅದಕ್ಕಾಗಿ ನಮ್ಮ ಮನಸ್ಸನ್ನು ನಾವು ಹೇಳಿದ ಹಾಗೆ ಕೇಳುವಂತೆ ಮಾಡಿಕೊಳ್ಳಬೇಕು ಎಂದರು.
     ಆರ್.ಆರ್. ಶಿವಕುಮಾರ್ ಮಾತನಾಡಿ ಬುದ್ಧನ ನಡೆ-ನುಡಿಗಳನ್ನು ಸ್ವಲ್ಪಮಟ್ಟಿಗಾದರೂ ಅನುಸರಿಸುತ್ತಿರುವುದರಿಂದ ಪ್ರಸ್ತುತ ಆನಂದ ಪಡೆಯುತ್ತಿದ್ದೇವೆ. ಇಲ್ಲದಿದ್ದರೆ ಇಡೀ ಜೀವನವೆ ದುಃಖಮಯವಾಗುತ್ತಿತ್ತು. ಆದ್ದರಿಂದ ನಮ್ಮ ದುಃಖಗಳೇನು, ಅವುಗಳಿಗೆ ಕಾರಣವೇನು ಎಂಬುದನ್ನು ನಾವೇ ಹುಡುಕಿ ಪರಿಹಾರ ಪಡೆಯೋಣ ಎಂದು ತಿಳಿಸಿದರು. ಡಾ.ಆರ್.ಜಿ. ಕವಿತಾ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಎಸ್.ಕೆ. ಸಹನಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts