More

    ಪಂಪ್‌ಸೆಟ್ ಗಣತಿ ಮಾಡಲು ತೀರ್ಮಾನ

    ದಾವಣಗೆರೆ : ಗುಣಮಟ್ಟದ ವಿದ್ಯುತ್ ಅನ್ನು ಸಮರ್ಪಕವಾಗಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಅನಧಿಕೃತ ಮತ್ತು ಅಧಿಕೃತ ಪಂಪ್‌ಸೆಟ್ಗಳ ಗಣತಿ ಮಾಡಲು ನಗರದಲ್ಲಿ ಶುಕ್ರವಾರ ನಡೆದ ರೈತರು ಮತ್ತು ಬೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
     ನಿರಂತರ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ರೈತರು ರೋಸಿ ಹೋಗಿದ್ದು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಪರಿವರ್ತಕಗಳ ದುರಸ್ತಿ ಮತ್ತು ಬದಲಾವಣೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ರೈತರು ಆಗ್ರಹಿಸಿದರು.
     ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಕಾರ್ಯಪಾಲಕ ಇಂಜಿನಿಯರ್ ಎಸ್.ಕೆ. ಪಟೇಲ್, 5 ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತೇವೆ. ಆದರೆ ಅನಧಿಕೃತ ಪಂಪ್‌ಸೆಟ್ಗಳ ಮಾಹಿತಿ ಬೇಕು. ನಮ್ಮ ದಾಖಲೆಗಳಲ್ಲಿ ಇರುವುದಕ್ಕೂ ವಾಸ್ತವತೆಗೂ ಬಹಳ ವ್ಯತ್ಯಾಸವಿದೆ. ಹೀಗಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಸಮಸ್ಯೆ ಇದೆ ಎಂದರು.
     ರೈತರು ಸಹಕರಿಸಿದರೆ ನಮ್ಮ ಕಚೇರಿ ವಿಭಾಗಕ್ಕೆ ಬರುವ ದಾವಣಗೆರೆ, ಜಗಳೂರು ಮತ್ತು ಚನ್ನಗಿರಿ ತಾಲೂಕಿನಲ್ಲಿರುವ ಎಲ್ಲ ಪಂಪ್‌ಸೆಟ್ಗಳ ಗಣತಿ ಮಾಡಬೇಕು. ಆಗ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
     ಈ ಪ್ರಸ್ತಾವಕ್ಕೆ ರೈತರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು. ಈಗಿನ ಪರಿಸ್ಥಿತಿಯಲ್ಲಿ ಪ್ರತಿ ದಿನ 7 ಗಂಟೆ 3 ಫೇಸ್ ಕೊಡಲು ಸಾಧ್ಯವಿಲ್ಲ. 5 ಗಂಟೆ ಕೊಡಲಾಗುವುದು ಎಂದು ಪಟೇಲ್ ಹೇಳಿದಾಗ, ರೈತರು ಲೋಡ್ ಶೆಡ್ಡಿಂಗ್ ಇಲ್ಲದೇ ನಿರಂತರವಾಗಿ ಮತ್ತು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಬೆಸ್ಕಾಂ ಅಧಿಕಾರಿಗಳು ಲೋಡ್ ಶೆಡ್ಡಿಂಗ್ ಸಂಪೂರ್ಣ ಇರುವುದಿಲ್ಲ ಎಂದು ಹೇಳಿದರು.
     ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಬುಳ್ಳಾಪುರದ ಹನುಮಂತಪ್ಪ, ಬೆಳವನೂರು ನಾಗೇಶ್ವರ ರಾವ್, ಈಚಗಟ್ಟದ ಕರಿಬಸಪ್ಪ, ಅಣಬೇರು ಅಣ್ಣಪ್ಪ, ಬಲ್ಲೂರು ಅಣ್ಣಪ್ಪ, ಎಸ್.ಟಿ. ಪರಮೇಶ್ವರಪ್ಪ, ಆರನೇಕಲ್ಲು ವಿಜಯಕುಮಾರ, ಕೊಗ್ಗನೂರು ಹನುಮಂತಪ್ಪ, ಚಿನ್ನಸಮುದ್ರದ ಭೀಮಾನಾಯ್ಕ್ ಇದ್ದರು.
     ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಜಿ.ಎಂ. ನಾಯಕ್, ತೀರ್ಥೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts