More

    ತಂತ್ರಜ್ಞಾನದ ಜತೆಗೆ ಗುಣಮಟ್ಟದ ಸೇವೆ

    ದಾವಣಗೆರೆ : ಅಂಚೆ ಇಲಾಖೆ ಬದಲಾದ ತಂತ್ರಜ್ಞಾನಕ್ಕೆ ಹೊಂದಿಕೊಂಡು ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ ಎಂದು ಅಂಚೆ ಇಲಾಖೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.
     ಅಂಚೆ ಇಲಾಖೆಯಿಂದ ನಗರದ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಅಂಚೆ ಉಳಿತಾಯ ಖಾತೆ, ಜೀವ ವಿಮೆ, ಆಧಾರ್ ತಿದ್ದುಪಡಿ ಹಾಗೂ ಹೊಸ ನೋಂದಣಿ, ಸುಕನ್ಯಾ ಸಮೃದ್ಧಿ ಒಳಗೊಂಡು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಸೇವೆಯನ್ನು ಇಲಾಖೆ ಒದಗಿಸುತ್ತಿದೆ. ನೌಕರರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
     ದಾವಣಗೆರೆ ಜಿಲ್ಲೆಯ 25ನೇ ವರ್ಷದ ಪ್ರಯುಕ್ತ ಬರುವ ದಿನಗಳಲ್ಲಿ ವಿಶೇಷ ಲಕೋಟೆ ಕಾರ್ಯಕ್ರಮ ನಡೆಸಲಾಗುವುದು ಎಂದ ಅವರು ಅಂಚೆ ಸೇವೆ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಶ್ರಮಿಸುತ್ತಿದೆ ಎಂದರು.
     ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್‌ಆಲಿ ಮಾತನಾಡಿ ಅಂಚೆ ಇಲಾಖೆ ಭಾರತೀಯ ಇತಿಹಾಸದಲ್ಲೇ ಅತ್ಯಂತ ಪುರಾತನ ಇಲಾಖೆ. ಆಧುನಿಕ ಹಾಗೂ ವೈಜ್ಞಾನಿಕ ದಿನಮಾನಗಳಲ್ಲೂ ತನ್ನ ಅಗತ್ಯತೆಯೊಂದಿಗೆ ಸಮಾಜಮುಖಿ ಕಾರ್ಯಗಳ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
     ಉಪ ಅಂಚೆ ಅಧೀಕ್ಷಕ ಗುರುಪ್ರಸಾದ್ ಮಾತನಾಡಿ ಒಂದು ಸೂರು ಸೇವೆ ನೂರು ಎಂಬ ನಿಟ್ಟಿನಲ್ಲಿ ಅಂಚೆ ಇಲಾಖೆಯ ಹಲವು ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.
     ವ್ಯವಸ್ಥಾಪಕ ಕೆ.ಎಚ್.ಶ್ರೀನಿವಾಸ್ ಮಾತನಾಡಿ ಪ್ರಸ್ತುತ ಅಂಚೆ ಇಲಾಖೆಯಲ್ಲಿ ಪ್ರೀಮಿಯಂ ಖಾತೆ ತೆರೆದರೆ ದೇಶದ ಯಾವುದೇ ಭಾಗದಲ್ಲಿ ವಹಿವಾಟು ನಡೆಸಬಹುದಾಗಿದೆ. ಇಲಾಖೆಯ ಅಪಘಾತ ಹಾಗೂ ಆರೋಗ್ಯ ವಿಮೆಗಳು ಆಪತ್ಕಾಲದಲ್ಲಿ ಗ್ರಾಹಕರಿಗೆ ಪ್ರಯೋಜನಕಾರಿಯಾಗಿವೆ ಎಂದರು.
     ಮಹಾನಗರ ಪಾಲಿಕೆ ಉಪ ಆಯುಕ್ತೆ ನಳಿನಾ, ಮುಖ್ಯ ಅಂಚೆ ಪಾಲಕ ಸದ್ಯೋಜಾತಪ್ಪ, ವೇಣುಗೋಪಾಲ್ ಇತರರು ಇದ್ದರು.
     * ಪರಿಹಾರದ ಚೆಕ್ ವಿತರಣೆ:
     ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅಂಚೆ ಇಲಾಖೆಯ ಅಪಘಾತ ವಿಮೆ ನೆರವಿಗೆ ಬಂದಿದ್ದು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 10 ಲಕ್ಷ ರೂ.ಗಳ ವಿಮಾ ಪರಿಹಾರದ ಚೆಕ್ ವಿತರಿಸಲಾಯಿತು.
     ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಉಪ ವ್ಯವಸ್ಥಾಪಕರಾಗಿದ್ದ ವಿದ್ಯಾನಗರದ ನಿವಾಸಿ ಡಿ.ಸಿ. ಸುರೇಶ್ ಎಂಬುವರು ಕಳೆದ ಜನವರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಅಂಚೆ ಇಲಾಖೆಯಲ್ಲಿ 399 ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಿದ್ದರಿಂದ ಕುಟುಂಬಕ್ಕೆ ಆಸರೆಯಾಗಿತು. ಮೃತರ ಪತ್ನಿ ಎಂ.ಜೆ. ಕವಿತಾ ಅವರಿಗೆ ಪರಿಹಾರದ ಚೆಕ್ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts