More

    ಮಾದಕವಸ್ತು ಜಾಲ ಮಟ್ಟ ಹಾಕಲು ಸೂಚನೆ

    ದಾವಣಗೆರೆ : ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ತಡೆಗಟ್ಟಲು ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಜಿಲ್ಲೆಯಲ್ಲೂ ಈ ಪಿಡುಗನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಸೂಚನೆ ನೀಡಿದರು.
     ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮಂಗಳವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಸೇರಿ ಬಹಳಷ್ಟು ಶಿಕ್ಷಣ ಸಂಸ್ಥೆಗಳಿವೆ. ಅಂಥ ಕಡೆ ಈ ಜಾಲ ಕೆಲಸ ಮಾಡುವ ಸಾಧ್ಯತೆ ಇರುವುದರಿಂದ ಅದನ್ನು ಹತೋಟಿಗೆ ತರಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
     ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಪ್ರಸ್ತಾಪಿಸಿ, ರಾಜ್ಯದಲ್ಲಿ ಕಳೆದ ವರ್ಷ 11,732 ಜನ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ, ಅದರಲ್ಲಿ ಶೇ. 60ರಷ್ಟು ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ. ಆದ್ದರಿಂದ ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ ಎಂದರು.
     ಭಾರತೀಯ ಮೋಟಾರು ವಾಹನ ಕಾಯ್ದೆ ಪ್ರಕಾರ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್‌ಗಳು ಐಎಸ್‌ಐ ಗುಣಮಟ್ಟ ಹೊಂದಿರಬೇಕು. ಅರ್ಧ ಹೆಲ್ಮೆಟ್ ಧರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ಚೆನ್ನೈನಲ್ಲಿ ಶೇ. 99ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು.
     ಇದಕ್ಕೂ ಮೊದಲು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮಂಡಿಸಿದರು. ಮಹಮ್ಮದ್ ಜಬಿವುಲ್ಲಾ ಮಾತನಾಡಿ, ದಾವಣಗೆರೆಯಲ್ಲಿ ಗಾಂಜಾ ಇನ್ನಿತರ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಹೆಚ್ಚಾಗುತ್ತಿದೆ. ಯುವಜನರು ಅದರ ವ್ಯಸನಕ್ಕೆ ಒಳಗಾಗಿದ್ದಾರೆ ಎಂದು ಆತಂಕ ತೋಡಿಕೊಂಡರು. ಹೆಲ್ಮೆಟ್ ಧರಿಸದವರ ಮೇಲೆ ಕ್ರಮ ಕೈಗೊಳ್ಳುವ ಪೊಲೀಸರು ತ್ರಿಬಲ್ ರೈಡಿಂಗ್, ಕರ್ಕಶ ಹಾರ್ನ್ ಬಳಕೆಗೆ ಕಡಿವಾಣ ಹಾಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
     ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಜಿಲ್ಲೆಯಲ್ಲಿ ಜೂಜು ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಜನರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಆರ್‌ಟಿಐ ಕಾರ್ಯಕರ್ತರೆಂದು ಹೇಳಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಗಮನ ಸೆಳೆದರು.
     ಟ್ರಾಫಿಕ್ ಸಿಗ್ನಲ್‌ನಲ್ಲಿ ಆಗುತ್ತಿರುವ ಗೊಂದಲ, ಹೆಲ್ಮೆಟ್ ಬಳಕೆಯ ವಿನಾಯಿತಿ ಬಗ್ಗೆ ಬಾಡದ ಆನಂದರಾಜು ಪ್ರಸ್ತಾಪಿಸಿದರು. ಸಂಚಾರ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಎನ್.ಕೆ. ಕೊಟ್ರೇಶ್, ಟಿ.ಜೆ. ಮುರುಗೇಶ್, ರಾಜಶೇಖರ್, ಸತೀಶ್, ಮಂಜುನಾಥ್ ಬೆಳಕು ಚೆಲ್ಲಿದರು. ಚನ್ನಬಸಪ್ಪ ಗೌಡ್ರು, ಸರ್ದಾರ್ ಸಾಬ್, ಅಸ್ಗರ್ ಬಾಷಾ, ಲೀಲಾ ಮೂರ್ತಿ ಮಾತನಾಡಿದರು.
     ಎಸ್ಪಿ ಉಮಾ ಪ್ರಶಾಂತ್ ಸ್ವಾಗತಿಸಿದರು. ಪೂರ್ವ ವಲಯ ಐಜಿಪಿ ಡಾ. ಕೆ. ತ್ಯಾಗರಾಜನ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ ಇದ್ದರು.
     …
     * 1.11 ಲಕ್ಷ ಜನ ದಂಡ ಕಟ್ಟಿಲ್ಲ
     ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 1.11 ಲಕ್ಷ ಜನರು ದಂಡ ಪಾವತಿಸಿಲ್ಲ. ವಿಶೇಷ ಅಭಿಯಾನದ ಮೂಲಕ ದಂಡ ವಸೂಲಿ ಮಾಡುವಂತೆ ಜಿಲ್ಲೆಯ ಪೊಲೀಸರಿಗೆ ಅಲೋಕ್ ಕುಮಾರ್ ಸೂಚನೆ ನೀಡಿದರು.
     ಕಾನೂನು ಉಲ್ಲಂಘನೆ ಮಾಡಿದವರ ಮನೆ ಬಾಗಿಲಿಗೇ ಹೋಗಿ ದಂಡ ವಸೂಲಿ ಮಾಡಬೇಕು ಎಂದ ಅವರು, ತಂತ್ರಜ್ಞಾನವನ್ನು ಬಳಸಿ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಪ್ರಯತ್ನಿಸಿದರೆ ಕೆಲವರು ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ರಾಜಾರೋಷವಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts