More

    ಅಭಿವೃದ್ಧಿ ಮಾಡದವರನ್ನು ಮನೆಗೆ ಕಳಿಸಿ

    ದಾವಣಗೆರೆ : ಜಿಲ್ಲೆಯಲ್ಲಿ ಸಾಕಷ್ಟು ವರ್ಷ ಆಳ್ವಿಕೆ ನಡೆಸಿಯೂ ಅಭಿವೃದ್ಧಿ ಮಾಡದವರನ್ನು ಈ ಬಾರಿಯ ಚುನಾವಣೆಯಲ್ಲಿ ಮನೆಗೆ ಕಳಿಸುವ ಜತೆಗೆ ಜಿಲ್ಲೆಯಿಂದಲೇ ಹೊರಹಾಕಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
     ನಗರದ ಶ್ರೀ ರೇಣುಕ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಚ್.ಎಸ್. ನಾಗರಾಜ್ ಕಾಂಗ್ರೆಸ್ ಸೇರ್ಪಡೆ ಹಾಗೂ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
     ದಾವಣಗೆರೆಯನ್ನು ಸಾಕಷ್ಟು ಯೋಜನೆಗಳ ಮೂಲಕ ಅಭಿವೃದ್ಧಿಪಡಿಸಲಾಗಿದ್ದು, ಮುಂದೆಯೂ ಪ್ರಗತಿಯತ್ತ ಕೊಂಡೊಯ್ಯಲಾಗುವುದು. ಲೋಕಸಭೆಯಲ್ಲೂ ನಮ್ಮವರಿದ್ದರೆ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
     ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲಿದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುವುದು ಬಹಳ ಮುಖ್ಯ ಎಂದರು.
     ಬಿಜೆಪಿಯಲ್ಲಿ ಸಾಕಷ್ಟು ಜನ ಮಾಜಿ ಶಾಸಕರು ಹಾಗೂ ಸಚಿವರನ್ನು ನಿರ್ಲಕ್ಷಿಸಲಾಗಿದೆ. ಎಚ್.ಎಸ್. ನಾಗರಾಜ್ ಬಹಳ ಹಿಂದೆಯೇ ಕಾಂಗ್ರೆಸ್‌ಗೆ ಬರಬೇಕಿತ್ತು. ಈಗ ಪಕ್ಷಕ್ಕೆ ಬಂದು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
     ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಯುವ ಮುಖಂಡ ಎಚ್.ಎಸ್. ನಾಗರಾಜ್ ಮಾತನಾಡಿ, ಜಿಲ್ಲೆಯ ಸಂಸದರು ಮಾತೆತ್ತಿದರೆ ಮೋದಿ ಎಂದು ಹೇಳುತ್ತಾರೆ. ಹಾಗಾದರೆ ದಾವಣಗೆರೆ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರಲ್ಲದೆ, ಕೇವಲ ಸ್ವಂತ ಅಭಿವೃದ್ಧಿಯಲ್ಲಿ ತೊಡಗಿರುವ ಸಂಸದರಿಗೆ ಪ್ರೀತಿ, ವಿಶ್ವಾಸ ತೋರಿಸುವ ಸೌಜನ್ಯವೂ ಇಲ್ಲ ಎಂದರು.
     ಪ್ರಸಕ್ತ ಲೋಕಸಭಾ ಚುನಾವಣೆ ಒಂದು ಸವಾಲಾಗಿದ್ದು, ಈ ಯುದ್ಧದಲ್ಲಿ ನಾವು ಗೆಲ್ಲಬೇಕಿದೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಾಯಕತ್ವದಲ್ಲಿ ಪ್ರಚಂಡ ಬಹುಮತದಿಂದ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಠಿ ಮಾಡಬೇಕು. ಒಳ್ಳೆಯತನಕ್ಕೆ ಏನು ಶಕ್ತಿಯಿದೆ ಎಂಬುದನ್ನು ತೋರಿಸಬೇಕು ಎಂದು ತಿಳಿಸಿದರು.
     ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ, ಮುಖಂಡರಾದ ಸೈಯದ್ ಸೈಫುಲ್ಲಾ, ಡಿ. ಬಸವರಾಜ್, ಎನ್.ಜಿ. ಪುಟ್ಟಸ್ವಾಮಿ, ಬಿ.ಎಚ್. ವೀರಭದ್ರಪ್ಪ, ತೆಲಗಿ ಈಶಪ್ಪ, ಎಸ್.ಕೆ. ಚಂದ್ರಶೇಖರಪ್ಪ, ಎಂ. ಜಯಕುಮಾರ್, ವಾಗೀಶ್‌ಸ್ವಾಮಿ, ಸೋಗಿ ಶಾಂತ್‌ಕುಮಾರ್, ಮೋತಿ ರಾಜೇಂದ್ರ, ಎಚ್.ಕೆ. ಬಸವರಾಜ್, ಆರ್. ಪ್ರತಾಪ್, ಮಟ್ಟಿಕಲ್ ವೀರಭದ್ರಸ್ವಾಮಿ, ಡಾ.ರವಿಕುಮಾರ್, ಬುತ್ತಿ ಹುಸೇನ್‌ಸಾಬ್, ನೀಲಗಿರಿಯಪ್ಪ, ಆಂಜನೇಯ ಗುರೂಜಿ, ಅನಿತಾಬಾಯಿ ಮಾಲತೇಶ್, ರುದ್ರಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts