More

    ಸೌಂದರ್ಯೋಪಾಸನೆ ಮನುಷ್ಯನ ಮೂಲ ಗುಣ

    ದಾವಣಗೆರೆ : ಸೌಂದರ್ಯೋಪಾಸನೆ ಮನುಷ್ಯನ ಮೂಲ ಗುಣಗಳಲ್ಲಿ ಒಂದು. ಅವನ ಕ್ರಿಯಾಶೀಲತೆಯಿಂದ ಕಲೆಗಳು ಅರಳಿವೆ, ಚಿತ್ರಕಲೆಯೂ ಅದರಲ್ಲಿ ಒಂದಾಗಿದೆ ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.
     ದಾವಣಗೆರೆ ಚಿತ್ರಕಲಾ ಪರಿಷತ್‌ನಿಂದ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಭಾನುವಾರ ಆಯೋಜಿಸಿರುವ ಚಿತ್ರಸಂತೆ ಕಾರ್ಯಕ್ರಮದ ಹಿನ್ನೆಲೆ ಶನಿವಾರ ನಡೆದ ಹಂದರಕಂಬ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಚಿತ್ರಕಲೆ, ಕ್ರಿಯಾಶೀಲತೆ ಮತ್ತು ಜೀವಂತಿಕೆಯ ಸಂಕೇತ. ಅದರಿಂದ ಮನಸ್ಸು ಅರಳುತ್ತದೆ. ಕಲಾವಿದ ತನಗೆ ಸುಂದರವಾಗಿ ಕಂಡಿದ್ದನ್ನು ಚಿತ್ರಕಲೆಯಾಗಿಸುತ್ತಾನೆ. ಆಧುನಿಕ ಮತ್ತು ಆಧುನಿಕೋತ್ತರ ಚಿತ್ರಕಲೆಗಳ ಬಗ್ಗೆ ನೋಡುಗರಿಗೆ ಸಣ್ಣ ವಿವರಣೆ ಬೇಕಾಗುತ್ತದೆ. ಅದನ್ನು ಚಿತ್ರಕಲಾ ಪರಿಷತ್ ಮಾಡಲಿ. ಭಾನುವಾರ ಇಡೀ ದಿನ ಎವಿಕೆ ಕಾಲೇಜು ರಸ್ತೆ ಚಿತ್ರಕಲೆ, ಕಲಾವಿದರಿಂದ ತುಂಬಿರಲಿ, ಚಿತ್ರಕಲೆ ವಿಜೃಂಭಿಸಲಿ, ಹೆಚ್ಚಿನ ಕಲಾಕೃತಿಗಳು ಮಾರಾಟ ಆಗಲಿ ಎಂದು ಆಶಿಸಿದರು.
     ದಾವಣಗೆರೆ ಟೆನಿಸ್ ಕ್ಲಬ್ ಅಧ್ಯಕ್ಷ ಡಾ. ಶ್ರೀಶೈಲ ಬ್ಯಾಡಗಿ ಮಾತನಾಡಿ, ಚಿತ್ರಕಲೆ ಬಗ್ಗೆ ನಾವು ಮನ ಬಂದಂತೆ ಅನಿಸಿಕೆ ಕೊಡಬಹುದು. ಆದರೆ ಚಿತ್ರವನ್ನು ಸೃಷ್ಟಿಸುವ ಕಲಾವಿದನಿಗೆ ಮಾತ್ರ ಅದರ ಕಷ್ಟ ಗೊತ್ತಿರುತ್ತದೆ ಎಂದರು.
     ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದೂ ಒಂದು ಕಲೆ. ಆಧುನಿಕ ಚಿತ್ರಕಲೆಗಳು ಹಲವು ಅರ್ಥಗಳನ್ನು ಹೊಮ್ಮಿಸುತ್ತವೆ. ಚಿತ್ರಸಂತೆ ಕಲಾವಿದರಿಗೆ ಉತ್ತಮ ವೇದಿಕೆಯಾಗಿದೆ. ಚಿತ್ರಕಲೆಯಲ್ಲಿ ಎಲ್ಲ ಭಾವಗಳೂ ಇದ್ದು ಅದನ್ನು ಆಸ್ವಾದಿಸುವ ಮನಸ್ಸು ಇರಬೇಕು ಎಂದು ಅಭಿಪ್ರಾಯಪಟ್ಟರು.
     ದೃಶ್ಯಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯ ಜಯರಾಜ ಚಿಕ್ಕಪಾಟೀಲ್ ಮಾತನಾಡಿ, ಇಲ್ಲಿ ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡುವ ಕೆಲಸಗಳು ಶಾಶ್ವತವಾಗಿ ನಿಲ್ಲುತ್ತವೆ. ದಾವಣಗೆರೆ ಸಾಂಸ್ಕೃತಿಕ ನಗರಿಯಾಗಿ ಬೆಳೆಯಬೇಕೆನ್ನುವುದು ನಮ್ಮ ಆಶಯ, ದೃಶ್ಯಕಲಾ ಮಹಾವಿದ್ಯಾಲಯದಿಂದ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.
     ಚಿತ್ರಸಂತೆಯಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ನೂರಕ್ಕೂ ಹೆಚ್ಚು ಕಲಾವಿದರ ಚಿತ್ರ ಪ್ರದರ್ಶನಗೊಳ್ಳಲಿದ್ದು ದಾವಣಗೆರೆ ಜನತೆ ಆಸ್ವಾದಿಸಬೇಕು. ಪೇಂಟಿಂಗ್‌ಗಳನ್ನು ಖರೀದಿಸಬೇಕು ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಿ.ಸಿ. ಶ್ರೀನಿವಾಸ ಜನ್ನಿಕಟ್ಟೆ ಮನವಿ ಮಾಡಿದರು.
     ಪರಿಷತ್ ಪದಾಧಿಕಾರಿಗಳಾದ ಸದಾನಂದ ಹೆಗಡೆ, ರವಿಶ್ಯಾಮ್ ಹುದ್ದಾರ್, ಶಾಂತಯ್ಯ ಪರಡಿಮಠ್, ವಿಜಯ ಕುಮಾರ್ ಜಾಧವ್, ಎಂ. ಅಶೋಕ್, ಗಣೇಶ್ ಆಚಾರ್, ಅಚ್ಯುತಾನಂದ, ಶಿವಕುಮಾರ್, ಕಾರ್ಯದರ್ಶಿ ಡಿ. ಶೇಷಾಚಲ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts