More

    ಮೌಲ್ಯಯುತ ಜೀವನ ಇಂದಿನ ಅಗತ್ಯ

    ದಾವಣಗೆರೆ : ಯುವಜನರು ಪದವಿ ಹಂತದಲ್ಲಿ ಜ್ಞಾನಾರ್ಜನೆಯ ಜತೆಗೆ ಸಮಾಜದಲ್ಲಿ ಬದುಕಲು ಅಗತ್ಯವಿರುವ ಕೌಶಲಗಳನ್ನು ರೂಢಿಸಿಕೊಂಡು ಮೌಲ್ಯಯುತ ಜೀವನ ನಡೆಸಿದಾಗ ಶೈಕ್ಷಣಿಕ ಪದವಿಗೆ ಮನ್ನಣೆ ಸಿಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸಲಹೆ ನೀಡಿದರು.
     ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಏರ್ಪಡಿಸಿದ್ದ ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
     ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿಯೇ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗುವುದು ಎಂದರು.
     ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಶ್ರಮದಾನವನ್ನು ಕಡ್ಡಾಯಗೊಳಿಸಲಾಗಿದೆ. ಪರಿಸರ ಸ್ವಚ್ಛತೆಯ ಮೂಲಕ ವೈಯಕ್ತಿಕ ಬದುಕನ್ನು ಸ್ವಚ್ಛ, ಸುಂದರಗೊಳಿಸಬೇಕು ಎಂಬುದು ಅದರ ಉದ್ದೇಶ. ಪರಿಸರ ಕಾಳಜಿ, ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
     ವಿದ್ಯಾರ್ಥಿಗಳು ಜೀವನ ಮತ್ತು ವೃತ್ತಿಯಲ್ಲಿ ಯಾವುದೇ ಸವಾಲನ್ನು ಧೈರ್ಯ, ಆತ್ಮವಿಶ್ವಾಸದಿಂದ ಎದುರಿಸಲು ಸನ್ನದ್ಧರಾಗಬೇಕು. ಜಾಗತಿಕ ಮಟ್ಟದಲ್ಲಿ ಹಲವಾರು ಅವಕಾಶಗಳಿದ್ದು, ಸೂಕ್ತವಾದುದನ್ನು ಆಯ್ಕೆ ಮಾಡಿಕೊಂಡು ಯಶಸ್ಸಿನ ಹಾದಿ ತುಳಿಯಬೇಕು. ವೈಯಕ್ತಿಕ ಬೆಳವಣಿಗೆಯ ಜತೆಗೆ ದುಡಿಯುವ ಸಂಸ್ಥೆ, ಕುಟುಂಬದ ಏಳಿಗೆಗೂ ಗಮನ ನೀಡಬೇಕು. ಎಲ್ಲರ ನೆಮ್ಮದಿಯಲ್ಲಿ ತಮ್ಮ ಸುಖವನ್ನು ಕಾಣುವ ಉದಾತ್ತ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
     ನಿವೃತ್ತ ಪ್ರಾಚಾರ್ಯ ಪರಶುರಾಮ್ ಖಟಾವಕರ್ ಮಾತನಾಡಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ಪಾಳೇದ ಪ್ರಾಸ್ತಾವಿಕ ಮಾತನಾಡಿದರು. ಪಿ. ಅಣ್ಣೇಶ ವಂದಿಸಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts