More

    ಯೋಜನೆ ಜಾರಿಯಲ್ಲಿ ವಿಳಂಬ ಸಹಿಸಲ್ಲ

    ದಾವಣಗೆರೆ : ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ತಾಕೀತು ಮಾಡಿದರು.
     ಜಿಲ್ಲಾಡಳಿತ ಭವನದಲ್ಲಿ ಶನಿವಾರ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೆಲವು ಕಾಮಗಾರಿಗಳು 4 ವರ್ಷವಾದರೂ ಪೂರ್ಣಗೊಂಡಿಲ್ಲ. ಕೆಲವಕ್ಕೆ ಹಣ ಬಿಡುಗಡೆಯಾದರೂ ಕೆಲಸ ಆರಂಭಿಸಿಲ್ಲ. ಈ ವಿಳಂಬವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
     ಶಾಲಾ ಕೊಠಡಿ, ಸಮುದಾಯ ಭವನ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ರಂಗಮಂದಿರ, ಬಸ್ ತಂಗುದಾಣ, ಶೌಚಗೃಹ, ಹೈಮಾಸ್ಟ್ ವಿದ್ಯುತ್ ದೀಪ, ಕಾಂಪೌಂಡ್ ಗೋಡೆ, ಗ್ರಂಥಾಲಯ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ ಹೀಗೆ ಒಂದೊಂದೇ ಕಾಮಗಾರಿಗಳ ಪ್ರಗತಿಯ ವಿವರಗಳನ್ನು ಪಡೆದುಕೊಂಡರು.
     ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇನ್ನೂ ಕೆಲಸ ಮುಗಿಯದಿದ್ದರೆ ಜನರಿಗೆ ಏನು ಉತ್ತರ ಹೇಳಬೇಕು ಎಂದು ಪ್ರಶ್ನಿಸಿದರು. ನನ್ನ ಅನುದಾನದಲ್ಲಿ ಮಾಡಿರುವ ಕಾಮಗಾರಿಗಳ ಬಳಿ ಹೆಸರು ಕಾಣುವಂತೆ ಫಲಕಗಳನ್ನು ಹಾಕಬೇಕು, ಇಲ್ಲದಿದ್ದರೆ ಜನರಿಗೆ ಗೊತ್ತಾಗುವುದು ಹೇಗೆ ಎಂದರು.
     ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕಳೆದ ಸಭೆಯಲ್ಲಿ ಮಾಹಿತಿ ನೀಡಿ, ಅದೇ ಕೆಲಸವನ್ನು ಆರಂಭಿಸಬೇಕಿದೆ ಎಂದು ಈ ಸಭೆಯಲ್ಲಿ ತಿಳಿಸಿದ್ದೀರಿ. ಇದು ಬೇಜವಾಬ್ದಾರಿಯಾಗುತ್ತದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಸ್.ಒ. ರವಿ ಅವರನ್ನು ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡರು. ಈ ಲೋಪಕ್ಕಾಗಿ ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅವರಿಗೆ ನಿರ್ದೇಶನ ನೀಡಿದರು.
     ‘ನಮ್ಮ ಕಷ್ಟ ನಿಮಗೇನು ಗೊತ್ತಿದೆ?, ಸೂಳೆಕೆರೆಯಲ್ಲಿ ಕುಡಿಯುವ ನೀರು ಕಡಿಮೆಯಾದರೆ, ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ನಾಲೆಗಳಿಗೆ ನೀರು ತಲುಪದಿದ್ದರೆ ನನಗೆ ದೂರವಾಣಿ ಕರೆ ಮಾಡುತ್ತಾರೆ. ಜನಪ್ರತಿನಿಧಿಯಾಗಿ ಎಷ್ಟೆಲ್ಲ ಜವಾಬ್ದಾರಿಗಳಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ’ ಎಂದರು. ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts