More

    ಭವನ ನಿರ್ಮಿಸದಿದ್ದರೆ ದಾವಣಗೆರೆ ಬಂದ್

    ದಾವಣಗೆರೆ: ಅಂಬೇಡ್ಕರ್ ಭವನ ನಿರ್ಮಾಣದ ನಿರ್ಲಕ್ಷೃ, ಸಿಜಿ ಆಸ್ಪತ್ರೆ ಹೊರಗುತ್ತಿಗೆ ನೌಕರರಿಗೆ ವೇತನ ವಿಳಂಬ, ಆಶ್ರಯ ಮನೆಗಳಿಗೆ ಇ-ಸ್ವತ್ತು ಹಾಗೂ ಹಕ್ಕುಪತ್ರ ನೀಡುವುದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಪ. ಜಾತಿ ಮತ್ತು ಪ. ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಗಮನ ಸೆಳೆಯಲಾಯಿತು.
     ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸಿ ಹಲವು ಸಮಸ್ಯೆಗಳ ಕುರಿತು ಮಾತನಾಡಿದರು.
     ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ದುಗ್ಗಪ್ಪ ಮಾತನಾಡಿ, ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರ ಅನುದಾನ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ನಗರ ಬಿಟ್ಟು ಹೊರವಲಯದ ಬೇತೂರು ಹಳ್ಳದ 1.4 ಎಕರೆ ಪ್ರದೇಶದಲ್ಲಿ ಭವನ ನಿರ್ಮಿಸಲು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
     ನಗರದಲ್ಲಿ ಬಹು ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಬಂದ್ ಸೇರಿ ದಾವಣಗೆರೆ ಜಿಲ್ಲಾ ಬಂದ್ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
     ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಉಮಾ ಪ್ರಶಾಂತ್, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿಸಿ ಸ್ಥಳ ವೀಕ್ಷಣೆ ನಡೆಸಿದ್ದಾರೆ. ಈ ವಿಷಯವನ್ನು ಡಿಸಿ ಗಮನಕ್ಕೆ ತಂದು ಶೀಘ್ರ ಸಭೆ ಕರೆಯಲು ತಿಳಿಸಲಾಗುವುದು. ಬಂದ್ ನಡೆಸುವ ಮಟ್ಟಕ್ಕೆ ಹೋಗುವುದು ಬೇಡ ಎಂದರು.
     ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸೂಕ್ತ ನಿರ್ದೇಶನ ನೀಡಿದ್ದಾರೆ. ನಗರದ ಅಗ್ನಿಶಾಮಕ ಠಾಣೆ ವ್ಯಾಪ್ತಿ ಹಾಗೂ ಹೈವೇ ಐಬಿ ಎದುರು ಎರಡು ಸ್ಥಳ ಗುರುತಿಸಲಾಗಿದೆ. ಇಲಾಖೆ ಹೆಸರಿಗೆ ನೋಂದಣಿಯಾದ ತಕ್ಷಣ ಭೂಮಿಪೂಜೆ ನಡೆಯಲಿದೆ ಎಂದು ತಿಳಿಸಿದರು.
     ಅಲ್ಲದೇ ನಗರದಲ್ಲಿ ಕಳೆದ 4 ವರ್ಷಗಳಿಂದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ ನಡೆಸಿಲ್ಲ. ಕೂಡಲೇ ಸಭೆ ಕರೆಯಲು ವ್ಯವಸ್ಥೆ ಮಾಡುವಂತೆ ದುಗ್ಗಪ್ಪ ಮನವಿ ಮಾಡಿದರು.
     ನಗರದ ಸಿಜಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪ.ಜಾತಿ ಹಾಗೂ ಪಂಗಡದ ಜನರು ಕೆಲಸ ನಿರ್ವಹಿಸುತ್ತಿದ್ದು, ರಾಯಚೂರು ಮೂಲದ ಖಾಸಗಿ ಏಜೆನ್ಸಿ ಟೆಂಡರ್ ಪಡೆದಿದೆ. ಆದರೆ, ಕಳೆದ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ನೀಲಗಿರಿ ದೂರಿದರು.
     ಐದಾರು ತಿಂಗಳು ಸಂಬಳ ಇಲ್ಲವೆಂದರೆ ನಾವು ಹೇಗೆ ಜೀವನ ನಡೆಸಬೇಕು. ಟೆಂಡರ್‌ದಾರರು ನಮ್ಮನ್ನು ಬೇಕಾಬಿಟ್ಟಿ ನೋಡಿಕೊಳ್ಳುತ್ತಿದ್ದಾರೆ. ನ್ಯಾಯ ಒದಗಿಸಬೇಕು ಎಂದು ಕಮಲಮ್ಮ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್‌ಪಿ, ಈ ಬಗ್ಗೆ ಲಿಖಿತ ದೂರು ಸಲ್ಲಿಸಿದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
     ಜಗಳೂರು ತಾಲೂಕು ಡಿಎಸ್‌ಎಸ್ ಸಂಚಾಲಕ ಸತೀಶ್ ಮಾತನಾಡಿ, ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಭರಮಸಮುದ್ರ ಹೊಸೂರು ಗ್ರಾಮದಲ್ಲಿ ಸುಮಾರು 40 ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ 2003-04ರಲ್ಲಿ ಆಶ್ರಯ ಮನೆ ನಿರ್ಮಿಸಿ ಕೊಡಲಾಗಿದೆ. ಆದರೆ, ಈವರೆಗೂ ನಿವಾಸಿಗಳಿಗೆ ಇ ಸ್ವತ್ತು, ಹಕ್ಕುಪತ್ರ ನೀಡಿಲ್ಲ ಎಂದರು.
     ಡಿಎಸ್‌ಎಸ್ ಮುಖಂಡ ರವಿಕುಮಾರ್ ಮಾತನಾಡಿ, ನಗರದಲ್ಲಿ ಆದಿಜಾಂಬವ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಎಸ್‌ಟಿ ಅಭಿವೃದ್ಧಿ ನಿಗಮಗಳು ಬಾಡಿಗೆ ಕಟ್ಟಡದ ಎರಡು, ಮೂರನೇ ಮಹಡಿಗಳಲ್ಲಿ ನಡೆಯುತ್ತಿವೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪಕ್ಕ ರಾಜಕಾಲುವೆಯಿಂದ ದುರ್ವಾಸನೆ ಬೀರುತ್ತಿದೆ. ನಿಗಮಕ್ಕೆ ಹೋಗಲು ಅನುಕೂಲವಾಗುವಂತೆ ನಗರಕ್ಕೆ ಸಮೀಪದಲ್ಲಿ ಕಚೇರಿ ತೆರೆಯಬೇಕು ಎಂದು ಕೋರಿದರು.
     ದಲಿತ ಮುಖಂಡ ಸೋಮ್ಲಾಪುರದ ಹನುಮಂತಪ್ಪ, ಕಟಿಜೆ ನಗರದ ಒಂದು ಮತ್ತು ಎರಡನೇ ಮೇನ್‌ನಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಬೇಕು ಎಂದರೆ, ಉಚ್ಚೆಂಗಪ್ಪ  ಹೊರವಲಯದ ಪೌರ ಕಾರ್ಮಿಕರ ಕ್ವಾಟರ್ಸ್‌ಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
     ಪ್ರಾದೇಶಿಕ ಸಾರಿಗೆ ಇಲಾಖೆ ಸಿ.ಎಸ್. ಪ್ರಮುತೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts