More

    ಮಹಾತ್ಮರ ಸ್ಮರಣೆಯಿಂದ ಉತ್ತಮ ಫಲ ಪ್ರಾಪ್ತಿ

    ದಾವಣಗೆರೆ : ಮಹಾತ್ಮರ ಸ್ಮರಣೆಯಿಂದ ಜೀವನದಲ್ಲಿ ಉತ್ತಮ ಫಲಗಳು ಲಭಿಸುತ್ತವೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
     ನಗರದ ಎಂಸಿಸಿ ಬಿ ಬ್ಲಾಕ್‌ನ ಶಿವಾಚಾರ್ಯ ನಿಕೇತನದಲ್ಲಿ ಸೋಮವಾರ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹಿರೇಮಠದ ಸ್ಥಿರಪಟ್ಟಾಧ್ಯಕ್ಷರಾದ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರ 16ನೇ ಸಂಸ್ಮರಣೋತ್ಸವದಲ್ಲಿ ಮಾತನಾಡಿದರು.
     ಜೀವನದಲ್ಲಿ ಮಹಾತ್ಮರು, ಹೆತ್ತವರು ಹಾಗೂ ಗುರುಹಿರಿಯರನ್ನು ನೆನೆಯಬೇಕು. ಇದರಿಂದ ಆಯುಷ್ಯ, ಕೀರ್ತಿ, ಯಶಸ್ಸು ಹಾಗೂ   ಬಲ ಎಂಬ ನಾಲ್ಕು ಫಲಗಳು ದೊರೆಯುತ್ತವೆ ಎಂದು ಭಕ್ತ ಮಾರ್ಕಂಡೇಯನ ಕಥೆಯನ್ನು ಉದಾಹರಿಸಿದರು.
     ಲಿಂ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ವಿದ್ಯಾಗುರುವಾಗಿ, ಭಕ್ತರಿಗೆ ಸನ್ಮಾರ್ಗದರ್ಶಿ ಗುರುವಾಗಿ, ಶಿವಾಚಾರ್ಯರಿಗೆ ಸರಳತೆಯ ಬದುಕು ಕಲಿಸುವ ಜತೆಗೆ ಉತ್ಸಾಹ ಹಾಗೂ ಪ್ರೋತ್ಸಾಹ ತುಂಬಿದ್ದರು ಎಂದು ತಿಳಿಸಿದರು.
     ಸದಾ ಭಕ್ತರ ಮಧ್ಯದಲ್ಲಿದ್ದುಕೊಂಡು ಸಮಾಜದಲ್ಲಿ ಹಲವು ಪ್ರಗತಿಪರ ಕಾರ್ಯ ಕೈಗೊಂಡ ಸ್ವಾಮೀಜಿಯವರು ವಿಶ್ವಕುಟುಂಬದ ಗುಣಗಳನ್ನು ಹೊಂದಿದ್ದರು. ಇಂತಹ ಮಹಾತ್ಮರ ಸ್ಮರಣೆ ಅವಶ್ಯಕ. ಮಹಾತ್ಮರನ್ನು ನೆನೆಯುವುದರಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.
     ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಮಾತೃಹೃದಯಿ, ಕಾಯಕಜೀವಿ ಹಾಗೂ ಧರ್ಮಪ್ರಚಾರಕರಾಗಿದ್ದ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರು ಯುವಜನರನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುವ ಕನಸನ್ನು ಹೊಂದಿದ್ದರು ಎಂದು ಹೇಳಿದರು.
     ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಪಾಲಕರು ತಮ್ಮ ಮಕ್ಕಳು ಡಾಕ್ಟರ್ ಹಾಗೂ ಇಂಜಿನಿಯರ್ ಆಗಬೇಕು ಎಂಬ ಗುಂಗಿನಲ್ಲಿದ್ದಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಕಾರವಂತರಗಬೇಕು. ಇದರಿಂದ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
     ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿವಿ ಕನ್ನಡ ಅಧ್ಯಯನ ವಿಭಾಗದ  ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಜಿ.ವಿಜಯಕುಮಾರ್ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.
     ಡಾ. ಸ್ವಾಮಿ ತ್ರಿಭುವಾನಂದ ಸ್ವಾಗತಿಸಿದರು. ವಾಸವಿ ಯುವತಿಯರ ಭಜನಾ ಮಂಡಳಿಯ ಡಿ.ಆರ್.ಕೃಷ್ಣವೇಣಿ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts