More

    ಅಪರಾಧ ಘಟನಾ ಸ್ಥಳ ಸಂರಕ್ಷಣಾ ಕಾಯ್ದೆ ಜಾರಿ ಅಗತ್ಯ

    ದಾವಣಗೆರೆ : ದೇಶದಲ್ಲಿ ಅಪರಾಧ ಘಟನಾ ಸ್ಥಳ ಸಂರಕ್ಷಣಾ ಕಾಯ್ದೆ (ಕ್ರೈಮ್ ಸೀನ್ ಆ್ಯಕ್ಟ್) ಜಾರಿಗೆ ತರಬೇಕು ಎಂದು ಜಮ್ಮುವಿನ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ. ದಿನೇಶ್ ರಾವ್ ಆಗ್ರಹಿಸಿದರು.
     ದಾವಣಗೆರೆ ವಿಶ್ವವಿದ್ಯಾಲಯದ ಕ್ರಿಮಿನಾಲಜಿ ಮತ್ತು ವಿಧಿವಿಜ್ಞಾನ ವಿಭಾಗದ ಸಹಯೋಗದಲ್ಲಿ ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ, ನ್ಯಾಯಾಂಗ ವಿಚಾರಣೆಯಲ್ಲಿ ವಿಧಿವಿಜ್ಞಾನ ಸಾಕ್ಷಿಗಳ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
     ಯಾವುದೇ ಅಪರಾಧ ಸಂಭವಿಸಿದಾಗ ಆ ಸ್ಥಳವನ್ನು ಸಂರಕ್ಷಿಸಿ ಸಾಕ್ಷಿಗಳು ನಾಶವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹಾಗೆ ಆಗುವುದಿಲ್ಲ. ಪೊಲೀಸರನ್ನು ಬಿಟ್ಟು ಎಲ್ಲರೂ ಅಲ್ಲಿರುತ್ತಾರೆ. ಆಗ ಸಾಕ್ಷಿಗಳನ್ನು ಕಾಪಾಡುವುದು ಕಷ್ಟವಾಗುತ್ತದೆ. ಅಲ್ಲಿಗೆ ಯಾರೂ ಹೋಗದಂತೆ ತಡೆಯಲು ಕಾನೂನು ಇಲ್ಲ. ಈ ಬಗ್ಗೆ ಗಮನ ಕೊಡಬೇಕಾಗುತ್ತದೆ. ಕಾಯ್ದೆ ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
     ಯಾವುದೇ ಅಪರಾಧದ ತನಿಖೆಯಲ್ಲಿ ಸಾಕ್ಷಿಗಳು ಮಹತ್ವದ ಪಾತ್ರ ವಹಿಸುತ್ತವೆ. ಸಾಕ್ಷಿಗಳನ್ನು ಮನ ಬಂದಂತೆ ಸಂಗ್ರಹಿಸದೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅದಕ್ಕೊಂದು ಶಿಷ್ಟಾಚಾರವಿರುತ್ತದೆ. ಅದರಲ್ಲಿ ಲೋಪವಾಗಬಾರದು ಎಂದು, ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ತನಿಖೆಯಲ್ಲಾದ ಲೋಪಗಳ ಬಗ್ಗೆ ಪ್ರಸ್ತಾಪಿಸಿದರು.
     ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರಿದಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಹಿಂದುಳಿದಿದ್ದೇವೆ. ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅದು ತನಿಖೆ ನಡೆಸುವವರ ವೈಫಲ್ಯವೇ ಹೊರತು ನ್ಯಾಯಾಂಗದ್ದಲ್ಲ. ಆದ್ದರಿಂದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
     ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಡಿ. ಕುಂಬಾರ್ ಮಾತನಾಡಿ, ವಕೀಲರಿಗೆ ಕ್ರಿಮಿನಾಲಜಿ ಮತ್ತು ವಿಧಿವಿಜ್ಞಾನದ ಅರಿವು ಹಾಗೂ ಜ್ಞಾನ ಇರಬೇಕು. ಜತೆಗೆ ಆಧುನಿಕ ತಂತ್ರಜ್ಞಾನದ ಜತೆಗೆ ಹೆಜ್ಜೆ ಹಾಕಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಅಂತರ್ ಶಿಸ್ತೀಯ ಹಾಗೂ ಬಹು ಶಿಸ್ತೀಯ ಅಧ್ಯಯನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರೆಣ್ಣವರ ಮಾತನಾಡಿ, ವಕೀಲರಿಗೆ ವಿಧಿವಿಜ್ಞಾನದ ಪರಿಚಯ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
     ಆರ್.ಎಲ್. ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಸ್. ಯತೀಶ್ ಮಾತನಾಡಿ, ವಿಜ್ಞಾನ, ಸಂಶೋಧನೆ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯಾದಾಗ ಕಾನೂನಿನ ಅವಶ್ಯಕತೆ ಇದ್ದೇ ಇರುತ್ತದೆ. ಆದ್ದರಿಂದ ವಕೀಲರು ಈ ವಿಚಾರಗಳನ್ನು ತಿಳಿದುಕೊಳ್ಳಬೇಕು. ಸರಿಯಾದ ನ್ಯಾಯದಾನ ಪ್ರಕ್ರಿಯೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
     ದಾವಣಗೆರೆ ವಿಶ್ವವಿದ್ಯಾಲಯದ ಕ್ರಿಮಿನಾಲಜಿ ಮತ್ತು ವಿಧಿವಿಜ್ಞಾನ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ. ನಟರಾಜ ವಿಚಾರ ಮಂಡನೆ ಮಾಡಿದರು. ಕೆ.ಎನ್. ಪ್ರದೀಪ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts