More

    ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆ

    ದಾವಣಗೆರೆ : ಫೆ. 3 ಮತ್ತು 4ರಂದು ನಗರದಲ್ಲಿ ನಡೆಯಲಿರುವ ಪತ್ರಕರ್ತರ ರಾಜ್ಯಮಟ್ಟದ 38ನೇ ಸಮ್ಮೇಳನವನ್ನು ಅರ್ಥಪೂರ್ಣ ಮತ್ತು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
     ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಳ್ಳಲಿದ್ದು, ಹಬ್ಬದ ಸಂಭ್ರಮ ಕಂಡುಬರಲಿದೆ ಎಂದು ತಿಳಿಸಿದರು.
     ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ, ಜಿಲ್ಲಾ ಘಟಕದ ಆತಿಥ್ಯ ಹಾಗೂ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. 31 ವರ್ಷಗಳ ಹಿಂದೆ (1992) ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ತಾಲೂಕು ಕೇಂದ್ರವಾಗಿದ್ದ ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆದಿತ್ತು. ದಾವಣಗೆರೆ ಜಿಲ್ಲೆ ರಚನೆಯಾಗಿ 25 ವರ್ಷಗಳ ನಂತರ ಪ್ರಥಮ ಬಾರಿಗೆ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
     
     * ಮೆರವಣಿಗೆ
     ಫೆ. 3ರ ಬೆಳಗ್ಗೆ 9 ಗಂಟೆಗೆ ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಜಯದೇವ ವೃತ್ತದಿಂದ ಮೆರವಣಿಗೆ ಹೊರಡಲಿದೆ. ಸಾರೋಟಿನಲ್ಲಿ ಇರಿಸಲಾಗುವ, ವೃಕ್ಷದ ಆಕೃತಿಯಲ್ಲಿ ಬರುವ ರೆಂಬೆ ಕೊಂಬೆಗಳಲ್ಲಿ ವಿವಿಧ ಪತ್ರಿಕೆಗಳ ಶಿರೋನಾಮೆಗಳನ್ನು ಬಿಂಬಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು ಗಮನ ಸೆಳೆಯಲಿವೆ ಎಂದು ತಿಳಿಸಿದರು.
     
     * ಉದ್ಘಾಟನೆ
     ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ವಸ್ತು ಪ್ರದರ್ಶನವನ್ನು, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸುವರು. ತಾವು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
     
     * ಗೋಷ್ಠಿಗಳು
     ಅಂದು ಮಧ್ಯಾಹ್ನ 2 ಗಂಟೆಗೆ ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’, ಸಂಜೆ 4 ಗಂಟೆಗೆ ‘ಪತ್ರಿಕೆಗಳು : ಹಿಂದೆ-ಇಂದು-ಮುಂದು’ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ, ಹಿರಿಯ ಪತ್ರಕರ್ತ ಈಶ್ವರ ದೈದೋಟ ಇತರರು ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
     ಫೆ. 4ರಂದು ಬೆಳಗ್ಗೆ 9.45ಕ್ಕೆ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ. 10.30ಕ್ಕೆ ‘ಮಾಧ್ಯಮ ಮತ್ತು ಸರ್ಕಾರ’ ಹಾಗೂ 11.30ಕ್ಕೆ ‘ಸಾಮಾಜಿಕ ಮಾಧ್ಯಮ – ವೃತ್ತಿ ವಿಶ್ವಾಸಾರ್ಹತೆ’ ವಿಷಯಗಳ ಕುರಿತು ಗೋಷ್ಠಿಗಳನ್ನು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಉದ್ಘಾಟಿಸಲಿದ್ದಾರೆ ಎಂದರು.
     
     * ಸಮಾರೋಪ
     ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್, ಲಕ್ಷ್ಮೀ ಹೆಬ್ಬಾಳ್‌ಕರ್, ಈಶ್ವರ ಖಂಡ್ರೆ, ಸಂಸದ ಜಿ.ಎಂ. ಸಿದ್ದೇಶ್ವರ ಪಾಲ್ಗೊಳ್ಳುವರು ಎಂದು ಹೇಳಿದರು.
     
     * ಪ್ರಶಸ್ತಿ, ಗೌರವಾರ್ಪಣೆ
     ಸಂಘದಿಂದ 40 ಜನರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ಪತ್ರಕರ್ತರನ್ನು ಗೌರವಿಸಲಾಗುತ್ತದೆ. ನಾಡಿನ ಹಿರಿಯ ಪತ್ರಕರ್ತರಿಗೆ ನೀಡುವ ಕೆಯುಡಬ್ಲ್ಯೂಜೆ ರಾಜ್ಯ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ 6 ಜನರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
     ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ ಎನ್.ವಿ. ಬದರಿನಾಥ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಪ್ಪ, ಹಿರಿಯ ಪತ್ರಕರ್ತರಾದ ಬಿ.ಎನ್. ಮಲ್ಲೇಶ್, ಎಚ್.ಬಿ. ಮಂಜುನಾಥ್, ಬಾ.ಮ.ಬಸವರಾಜಯ್ಯ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts