More

    ಉದ್ಯೋಗ ಮೇಳಕ್ಕೆ ಆಕಾಂಕ್ಷಿಗಳ ಲಗ್ಗೆ

    ದಾವಣಗೆರೆ : ಜಿಲ್ಲಾಡಳಿತದಿಂದ ನಗರದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಸಹಸ್ರಾರು ವಿದ್ಯಾರ್ಥಿಗಳು ಲಗ್ಗೆಯಿಟ್ಟರು. ಕೆಲಸದ ಕನಸು ಹೊತ್ತು ಬಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸದಿರುವುದು ನಿರಾಸೆಯ ಜತೆಗೆ ಕೊರಗು ಮೂಡಿಸಿತು.
     ನಗರದ ಹೈಸ್ಕೂಲ್ ಮೈದಾನದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಕೆಲಸದ ಹಂಬಲದಿಂದ ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪದವಿಗೆ ತಕ್ಕ ಉದ್ಯೋಗ ಪಡೆಯಲು ಯತ್ನ ನಡೆಸಿದರು. ಇಂಜಿನಿಯರಿಂಗ್, ಎಂ.ಕಾಂ, ಎಂಬಿಎ, ಎಂ.ಎಸ್‌ಸಿ ಪದವೀಧರರ ನಿರೀಕ್ಷೆಗೆ ತಕ್ಕ ಉದ್ಯೋಗಗಳಿಲ್ಲ ಎಂದು ಹಲವು ಯುವಕ-ಯುವತಿಯರು  ಬೇಸರ ವ್ಯಕ್ತಪಡಿಸಿದರು.
     ಮೇಳದಲ್ಲಿ ಸುಮಾರು 82 ಕಂಪನಿಗಳು ಭಾಗವಹಿಸಿವೆ ಎನ್ನಲಾಗಿದ್ದು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿಲ್ಲ. ದಾವಣಗೆರೆಯ ಟೆಕ್ಸ್‌ಟೈಲ್ಸ್ ಹಾಗೂ ಮಾರ್ಕೇಟಿಂಗ್ ಕಂಪನಿ ಸೇರಿ ಸ್ಥಳೀಯ ಕಂಪನಿಗಳೇ ಮೇಳದಲ್ಲಿ ಹೆಚ್ಚಾಗಿವೆ. ಉನ್ನತ ಶಿಕ್ಷಣ ಪಡೆದವರು ಉದ್ಯೋಗ ಸಿಗದೆ ಹಿಂದಿರುಗುವಂತಾಗಿದೆ ಎಂದು ಹಲವು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
     ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಟಾಟಾ ಕನ್ಸಲ್ಟೆಂಟ್, ಜಿಂದಾಲ್ ಸೇರಿ ಪ್ರತಿಷ್ಠಿತ ಸಾಫ್ಟ್‌ವೇರ್ ಮತ್ತು ಮೈನಿಂಗ್ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರೆ ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭಿಸುತ್ತಿದ್ದವು ಎಂದು ಜಿಲ್ಲಾಡಳಿತದ ಗಮನ ಸೆಳೆದದ್ದು ಸಹ ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಕನ್ನಡಿ ಹಿಡಿದಂತಾಯಿತು.
     ಬೆಳಗ್ಗೆ ಮೇಳಕ್ಕೆ ಬಂದೊಡನೆಯೇ ಮೊದಲು ಮುಗಿಬಿದ್ದು ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳು ಆನಂತರ ಮೇಳದಲ್ಲಿ ಭಾಗವಹಿಸಿದ ಕಂಪನಿಗಳ ಬಗ್ಗೆ ಹುಡುಕಾಟ ನಡೆಸಿದರು. ತಮ್ಮ ಪದವಿಗೆ ಅನುಗುಣವಾದ ಕೆಲಸ ಯಾವ ಕಂಪನಿಯಲ್ಲಿ ಸಿಗಲಿದೆ ಎಂಬುದರ ಮಾಹಿತಿ ಪಡೆದು ಹಲವು ಕಂಪನಿಗಳಿಗೆ ಶೈಕ್ಷಣಿಕ ದಾಖಲೆ ಸಲ್ಲಿಸಿದರು.
     ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ಪದವೀಧರರು, ಎಂಎಸ್‌ಸಿ ಕೆಮಿಸ್ಟ್ರಿ ಪದವಿ ಪಡೆದು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು, ಬಿ.ಇಡಿ, ಎಂ.ಕಾಂ ಹಾಗೂ ಎಂಬಿಎ ಸ್ನಾತಕೋತ್ತರ ಪದವೀಧರರು ಸಹ ಉದ್ಯೋಗ ಅರಸಿ ಬಂದಿದ್ದರು.
     ಇಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಹೋರಾಟ ನಡೆಸುವ ಸ್ಥಿತಿಯಿದೆ. ಸ್ಥಳೀಯ ಜಿಲ್ಲೆಗಳಲ್ಲಿ ಸೀಮಿತ ಅವಕಾಶಗಳಿದ್ದರೂ ಅನುಭವ ಕೇಳುವುದರಿಂದ ಕೆಲಸ ಸಿಗುವುದಿಲ್ಲ. ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗ ಎಂದರೆ ಕೇವಲ ಬೆಂಗಳೂರು ಮಾತ್ರ ಎಂಬಂತಾಗಿದೆ. ಮಧ್ಯಕರ್ನಾಟಕದಲ್ಲಿ ಹೆಚ್ಚು ಉದ್ಯೋಗಾವಕಾಶ ಲಭ್ಯವಾಗಬೇಕು ಎಂಬ ಅಭಿಪ್ರಾಯಗಳು ಕೇಳಿಬಂದವು.
     ಆನ್‌ಲೈನ್ ಹಾಗೂ ಆಫ್‌ಲೈನ್ ಸೇರಿ 2269 ವಿದ್ಯಾರ್ಥಿಗಳು ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿದ್ದು ಇದರಲ್ಲಿ 1220 ವಿದ್ಯಾರ್ಥಿಗಳು ಹಾಗೂ 1049 ವಿದ್ಯಾರ್ಥಿನಿಯರಿದ್ದಾರೆ. ಇದರಲ್ಲಿ ಸ್ಥಳದಲ್ಲಿಯೇ 139 ವಿದ್ಯಾರ್ಥಿಗಳು ಮತ್ತು 77 ವಿದ್ಯಾರ್ಥಿನಿಯರಿಗೆ ಆಫರ್ ಲೆಟರ್ ನೀಡಲಾಗಿದೆ. ಎರಡನೇ ಹಂತದಲ್ಲಿ ಸುಮಾರು 857 ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹಾವೇರಿ, ಕೊಪ್ಪಳ ಮೊದಲಾದ ಜಿಲ್ಲೆಗಳ ವಿದ್ಯಾರ್ಥಿಗಳೂ ಮೇಳದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts