More

    ಬೆಣ್ಣೆನಗರಿಯಲ್ಲಿ ಜಗನ್ನಾಥ ರಥಯಾತ್ರೆಯ ವೈಭವ

    ದಾವಣಗೆರೆ : ಪುರಿ ಜಗನ್ನಾಥ ರಥೋತ್ಸವ ವಿಶ್ವವಿಖ್ಯಾತವಾದುದು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರುವ ಆ ವಿರಾಟ್ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಅದನ್ನೇ ಹೋಲುವ ಮಹೋತ್ಸವ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಂಗಳವಾರ ನಡೆಯಿತು.
     ಇಸ್ಕಾನ್ ಸಂಸ್ಥೆಯ ವತಿಯಿಂದ ಎರಡನೇ ಬಾರಿಗೆ ಆಯೋಜಿಸಲಾಗಿದ್ದ ಶ್ರೀ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು. ಅಲ್ಲಿ ಸಂಗೀತವಿತ್ತು, ನರ್ತನ, ಪೂಜೆ, ಭಜನೆಗಳು ಮೇಳೈಸಿದ್ದವು. ಎಲ್ಲೆಲ್ಲೂ ಭಗವಂತನ ನಾಮಸ್ಮರಣೆ. ‘ಜೈ ಜಗನ್ನಾಥ ಸ್ವಾಮಿ’, ‘ಹರೇ ಕೃಷ್ಣ, ಹರೇ ರಾಮ’ ಜಪ ಕೇಳಿ ಬಂದಿತು.
     ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ರಥಯಾತ್ರೆ ಆರಂಭವಾಯಿತು. ಭಗವಂತನ ಉತ್ಸವ ಮೂರ್ತಿಗಳನ್ನು ಇಡಲಾಗಿದ್ದ ಪುಷ್ಪಾಲಂಕೃತ ರಥಕ್ಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಆರತಿ ಬೆಳಗಿ, ಸಂಪ್ರದಾಯದಂತೆ ಸಾಂಕೇತಿಕವಾಗಿ ಕಸ ಗುಡಿಸಿ ಚಾಲನೆ ನೀಡಿದರು. ಸತೀಶ ಪೂಜಾರಿ ಇದ್ದರು.
     ಈ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆಯ ದಾವಣಗೆರೆ ಶಾಖೆಯ ಮುಖ್ಯಸ್ಥ ಅವಧೂತ ಚಂದ್ರದಾಸ ಮಾತನಾಡಿ, ಜಗನ್ನಾಥ ರಥಯಾತ್ರೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಭಕ್ತರು ಇರುವಲ್ಲಿಗೇ ಭಗವಂತನು ಬಂದು ದರ್ಶನ ನೀಡುತ್ತಾನೆ, ಕೃಪಾದೃಷ್ಟಿ ಬೀರುತ್ತಾನೆ. ಸ್ವಾಮಿ ಪ್ರಭುಪಾದರ ಕನಸೂ ಅದೇ ಆಗಿತ್ತು ಎಂದು ಹೇಳಿದರು.
     ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ನೆರೆದಿದ್ದ ಭಕ್ತರು ರಥ ಎಳೆದು ಧನ್ಯತಾಭಾವ ಅನುಭವಿಸಿದರು. ನಾಮಧಾರಿಗಳಾಗಿದ್ದ ಅವರೆಲ್ಲ ಭಗವಂತನ ಧ್ಯಾನ ಮಾಡುತ್ತ ಉತ್ಸವದಲ್ಲಿ ಭಾಗಿಯಾದರು. ರಥಯಾತ್ರೆ ಸಾಗಿದ ಬೀದಿಯನ್ನು ಶುಚಿಗೊಳಿಸಿ ಅಲ್ಲಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು.
     ರಥಯಾತ್ರೆಯು ಚಾಮರಾಜಪೇಟೆ ವೃತ್ತಕ್ಕೆ ಬಂದಾಗ ಸಂಸದ ಜಿ.ಎಂ. ಸಿದ್ದೇಶ್ವರ ಆಗಮಿಸಿ ರಥದಲ್ಲಿದ್ದ ಜಗನ್ನಾಥ ಸ್ವಾಮಿಯ ಮೂರ್ತಿಗಳ ದರ್ಶನ ಪಡೆದರು. ಸಂಪ್ರದಾಯದಂತೆ ಸಾಂಕೇತಿಕವಾಗಿ ಪೊರಕೆ ಹಿಡಿದು ಕಸ ಗುಡಿಸಿದರು. ಅವರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿ.ಎಸ್. ಅನಿತ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್ ಇದ್ದರು.
     ರಥಯಾತ್ರೆಗೆ ಕಲಾ ತಂಡಗಳು ಕಳೆ ನೀಡಿದವು. ಮುಂಭಾಗದಲ್ಲಿ ಒಂಟೆ ಹಾಗೂ ಎತ್ತುಗಳು ಸಾಗಿದವು. ಆಕರ್ಷಕ ಗೊಂಬೆಗಳು, ವಾದ್ಯವೃಂದ ಇದ್ದವು. ಸ್ವಾಮಿಯ ಕೀರ್ತನೆಯ ಜತೆಗೆ ಭಕ್ತರು ನರ್ತನ ಸೇವೆಯನ್ನು ಸಲ್ಲಿಸಿದರು.
     ರಥಯಾತ್ರೆಯು ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಅರುಣ ಸರ್ಕಲ್, ಆರ್.ಎಚ್. ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನ ಮಾರ್ಗವಾಗಿ ಗುಂಡಿ ವೃತ್ತಕ್ಕೆ ತೆರಳಿ ಅಂತ್ಯವಾಯಿತು.
     ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಚಳ್ಳಕೆರೆ, ಹೊಸಪೇಟೆ ಇನ್ನಿತರ ಕಡೆಗಳಿಂದ ಭಕ್ತರು ಆಗಮಿಸಿದ್ದರು.
     ಉತ್ಸವದ ಅಂಗವಾಗಿ ಬೆಳಗ್ಗೆ ಶ್ರೀ ನರಸಿಂಹ ಯಜ್ಞ ನೆರವೇರಿತು. ಸಂಜೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಜಗನ್ನಾಥ ಮಹಾಮಂಗಳಾರತಿ, ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ ನೆರವೇರಿದವು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts