More

    ಶಿಥಿಲಾವಸ್ಥೆಯಲ್ಲಿ ಶತಮಾನದ ಸೇತುವೆ

    ಲೋಕೇಶ್ ಎಂ.ಐಹೊಳೆ, ಜಗಳೂರು: ಬ್ರಿಟಿಷರ ಕಾಲದ ಈ ಹಳೆಯ ಸೇತುವೆಗೆ ಶತಮಾನ ತುಂಬಿದೆ. ವಯೋ ಸಹಜ ಎಂಬಂತೆ ಶಿಥಿಲಗೊಂಡು ದಿನೇದಿನೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಯಾವ ಹೊತ್ತಲ್ಲಿ ಅನಾಹುತ ಸಂಭವಿಸುವುದೋ? ಪ್ರಯಾಣಿಕರನ್ನೆಲ್ಲಿ ತನ್ನಡಿಗೆ ಕೆಡವಿಕೊಳ್ಳುತ್ತದೆಯೋ? ಎಂಬ ಆತಂಕ ಕಾಡುತ್ತಿದೆ.

    ಜಗಳೂರು-ದಾವಣಗೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ, ಬಿಳಿಚೋಡು ಗ್ರಾಮದ ಈ ಸೇತುವೆ ಅಪಾಯದ ಅಂಚಿನಲ್ಲಿದೆ. ಅನಾಹುತಕ್ಕೆ ಬಾಯ್ತೆರೆದು ಕುಳಿತಂತಿದೆ. ಮರು ಕಾಮಗಾರಿ, ಕಾಯಕಲ್ಪದತ್ತ ಎದುರು ನೋಡುತ್ತಿದೆ. ಜಗಳೂರು-ದಾವಣಗೆರೆ ಮಧ್ಯೆ ಮುಖ್ಯ ರಸ್ತೆಯಾಗಿರುವುದರಿಂದ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಯಾವ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದೆಂಬ ಭೀತಿ ಗ್ರಾಮಸ್ಥರದು.

    ಈಗಿನ ಸೇತುವೆಗಳು 50 ವರ್ಷ ಬಾಳಿಕೆ ಬಂದರೆ ಹೆಚ್ಚಾಯಿತು. ಆದರಿದು ಬರೋಬ್ಬರಿ ನೂರು ವರ್ಷದ ಹೊಸ್ತಿಲಲ್ಲಿದೆ. ಇತ್ತೀಚೆಗೆ ಕೆಲವು ಕಡೆ ಬಿರುಕು ಬಿಟ್ಟಿದುದ, ಕಬ್ಬಿಣದ ಸರಳುಗಳು ಹೊರ ಚಾಚಿವೆ. ಮತ್ತೊಂದೆಡೆ ಕೆಳ ಭಾಗದಲ್ಲಿ ಸಿಮೆಂಟ್ ಚಕ್ಕಳ ಉದುರುತ್ತಿದೆ. ಸೇತುವೆ ಕೆಳಗಡೆ ಹಳ್ಳ ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತದೆ. ವಾಹನಗಳ ಓಡಾಟ ಹೆಚ್ಚಿದಂತೆಲ್ಲ ಸೇತುವೆಗೆ ರಕ್ಷಣೆ ಇಲ್ಲವಾದ್ದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ತಾಲೂಕು ಆಡಳಿತ ಗಮನ ಹರಿಸಬೇಕೆಂಬುದು ಗ್ರಾಮಸ್ಥರ ಒತ್ತಾಸೆ.

    ವಾಹನ ಸಂಚಾರಕ್ಕೂ ಅಡ್ಡಿ: ರಾಜ್ಯ ಹೆದ್ದಾರಿ ಆಗಿದ್ದರಿಂದ ಲಾರಿ, ಬಸ್ ಹೀಗೆ ಸಾಕಷ್ಟು ಭಾರೀ ವಾಹನಗಳು ಸಂಚರಿಸುತ್ತವೆ. ಇಂಥ ದಾರಿಯಲ್ಲಿ ಕಿರು ಸೇತುವೆ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಒಂದು ವಾಹನ ಹೋಗುವವರೆಗೂ ಇನ್ನೊಂದು ನಿಂತಿರಬೇಕು. ಎರಡು ವಾಹನಗಳು ಒಟ್ಟಿಗೇ ಸಂಚರಿಸಲು ಅಸಾಧ್ಯ ಎಂಬಂತಿದೆ. ಕಣ್ತಪ್ಪಿ ಎರಡು ವಾಹನಗಳು ಹೋದರೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಕೆಲವೊಮ್ಮೆ ವಾಹನ ಹಿಂತೆಗೆಯುವ ವಿಚಾರದಲ್ಲಿ ಚಾಲಕರ ನಡುವೆ ಆಗಾಗ್ಗೆ ಗಲಾಟೆ ನಡೆದಿವೆ. ಕೆಲ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹೀಗೆ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿರುವ ಇದನ್ನು ತೆರವುಗೊಳಿಸಿ, ಹೊಸ ಸೇತುವೆ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆ.

    ದುಸ್ಥಿತಿಯಲ್ಲಿರುವ ಸೇತುವೆಯನ್ನು ಪರಿಶೀಲಿಸಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಶಾಸಕ ಎಸ್.ವಿ.ರಾಮಚಂದ್ರ ಕೂಡ ಕಾಳಜಿ ವಹಿಸಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಈ ಸಂಬಂಧ ಮತ್ತೊಮ್ಮೆ ಚರ್ಚಿಸಲಾಗುವುದು.

    ರುದ್ರಪ್ಪ, ಲೋಕೋಪಯೋಗಿ ಇಲಾಖೆ ಎಇಇ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts