More

    ಕಿಬ್ಬೊಟ್ಟೆಯ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ದಾವಣಗೆರೆ : ಕಿಬ್ಬೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಗರದ 51 ವರ್ಷದ ಮಹಿಳೆಯೊಬ್ಬರಿಗೆ ಆಧುನಿಕ ಹೈಪರ್ಥೆರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೋಥೆರಪಿ (‘ಹೈಪೆಕ್’) ಚಿಕಿತ್ಸಾ ವಿಧಾನದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ನಂಜಪ್ಪ ಹಾಸ್ಪಿಟಲ್ಸ್ ವೈದ್ಯರ ತಂಡ ಅಪರೂಪದ ಸಾಧನೆ ಮಾಡಿದೆ.
     ಸಾಮಾನ್ಯವಾಗಿ ಮೆಟ್ರೋಪಾಲಿಟನ್ ನಗರಗಳಲ್ಲಿ ಮಾತ್ರ ಕೈಗೊಳ್ಳುವ ಇಂಥ ಚಿಕಿತ್ಸೆಯನ್ನು ಮೊಟ್ಟ ಮೊದಲ ಬಾರಿಗೆ ದಾವಣಗೆರೆಯಲ್ಲಿ ನೀಡುವ ಮೂಲಕ ಆಸ್ಪತ್ರೆಯು ಗಮನ ಸೆಳೆದಿದೆ. ರೋಗಿಗಳಿಗೆ ಇದು ಭರವಸೆಯ ಆಶಾಕಿರಣವಾಗಿದೆ ಎಂದು, ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಎನ್. ನಿಶ್ಚಲ್ (ಎಂ.ಎಸ್, ಎಂ.ಸಿ.ಎಚ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ-ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆ) ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ಅಂಡಾಶಯದ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ ಮಹಿಳೆಗೆ ನಂಜಪ್ಪ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ತಜ್ಞರಿಂದ ಚಿಕಿತ್ಸೆ ನೀಡಲಾಯಿತು. ಕ್ಯಾನ್ಸರ್ 3-ಸಿ ಹಂತದಲ್ಲಿದ್ದ ಆ ಮಹಿಳೆಗೆ ಹೊಟ್ಟೆ ಉಬ್ಬುವುದು, ಹೊಟ್ಟೆಯೊಳಗೆ ನೀರು ತುಂಬಿಕೊಳ್ಳುವುದು ಇಂಥ ಲಕ್ಷಣಗಳಿದ್ದವು ಎಂದು ಮಾಹಿತಿ ನೀಡಿದರು.
     ಆರಂಭದಲ್ಲಿ ಕಿಮೋಥೆರಪಿ ಮಾಡಲಾಯಿತು. ನಂತರ ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು 10 ಗಂಟೆಗಳ ದೀರ್ಘ ಕಾಲದ ವರೆಗೆ ಮಾಡಬೇಕಾಯಿತು. ಮುಂದಿನ ಹಂತದಲ್ಲಿ ಸೂಕ್ಷ್ಮವಾಗಿದ್ದ ಗಡ್ಡೆಗಳನ್ನೂ ತೆಗೆಯಲಾಯಿತು. ರೋಗಿಯು ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.
     ಶಿವಮೊಗ್ಗದಲ್ಲಿ 35 ವರ್ಷಗಳ ಪರಂಪರೆಯನ್ನು ಹೊಂದಿರುವ ನಂಜಪ್ಪ ಆಸ್ಪತ್ರೆಯು ದಾವಣಗೆರೆಗೆ ತನ್ನ ವೈದ್ಯಕೀಯ ಸೇವೆಯನ್ನು ವಿಸ್ತರಿಸಿದೆ. ತಜ್ಞರ ತಂಡ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಸ್ಥೆಯು ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
     ಮೆಡಿಕಲ್ ಆಂಕಾಲಜಿಸ್ಟ್ ಡಾ. ಪ್ರಸಾದ್ ಪಿ. ಗುಣಾರಿ, ಅರಿವಳಿಕೆ ತಜ್ಞ ಡಾ. ವಿಜಯ ಚಂದ್ರಪ್ಪ, ಚೀಫ್ ಆಪರೇಟಿಂಗ್ ಆಫೀಸರ್ ಪ್ರಶಾಂತ್, ನಂಜಪ್ಪ ಹಾಸ್ಪಿಟಲ್ಸ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ತ್ರಿವೇಣಿ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts