More

    ಬಣ್ಣದೋಕುಳಿಯಲ್ಲಿ ಮಿಂದೆದ್ದ ದೇವನಗರಿ

    ದಾವಣಗೆರೆ : ನಗರದಲ್ಲಿ ಸೋಮವಾರ ಹೋಳಿ ಹಬ್ಬದ ಸಂಭ್ರಮ. ಎಲ್ಲ ಬಡಾವಣೆಗಳು, ವೃತ್ತಗಳಲ್ಲಿ ರಂಗು ರಂಗಿನ ಬಣ್ಣದೋಕುಳಿಯಲ್ಲಿ ನಗರದ ಜನ ಮಿಂದೆದ್ದರು.
     ಮಕ್ಕಳು, ಯುವಜನರದೇ ಕ್ರೇಜ್. ಬೆಳಗ್ಗೆಯಿಂದಲೇ ಬಣ್ಣದೊಂದಿಗೆ ಹೊರಬಂದ ಮಕ್ಕಳು ಪರಸ್ಪರ ಎರಚಿಕೊಂಡರು. ತಮ್ಮ ಸ್ನೇಹಿತರಿಗೆ ಪಿಚಕಾರಿಯಿಂದ ಬಣ್ಣದ ನೀರನ್ನು ಸಿಂಪಡಿಸಿದರು.
     ಗೆಳೆಯರ ಗುಂಪಿನೊಂದಿಗೆ ಯುವಕ, ಯುವತಿಯರು ನಗರ ಪ್ರದಕ್ಷಿಣೆ ಹಾಕಿದರು. ಗುಲಾಬಿ, ಕೇಸರಿ, ಹಸಿರು ಮೊದಲಾದ ಬಣ್ಣಗಳಿಂದ ಅವರ ಮುಖಗಳು ಕಂಗೊಳಿಸಿದವು.
     ಎಸ್.ಎಸ್.ಬಡಾವಣೆಯಲ್ಲಿ ಕೆಲ ಮಹಿಳೆಯರು ತರಕಾರಿ ಹಾಗೂ ಹಣ್ಣುಗಳಿಂದ ತಯಾರಿಸಿದ ಬಣ್ಣಗಳಿಂದ ಹೋಳಿಯಾಡಿದರು.
     ಹೋಳಿ ಆಚರಣೆಗೆ ನಗರದ ರಾಮ್ ಆ್ಯಂಡ್ ಕೋ ವೃತ್ತ, ದಾವಣಗೆರೆ ಒನ್ ಸಮೀಪ ಹಾಗೂ ಎಂಸಿಸಿ ಬಿ ಬ್ಲಾಕ್, ಸ್ವಿಮ್ಮಿಂಗ್ ಫೂಲ್ ಬಳಿ ಡಿಜೆ, ನೀರಿನ ಸ್ಪಿಂಕ್ಲರ್‌ಗಳನ್ನು ಯುವಕ, ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
     ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಯುವಜನರ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ತುಂತುರು ನೀರಿನ ಹನಿಗಳ ಸ್ಪಿಂಕ್ಲರ್ ಕೆಳಗೆ ಡಿಜೆ ಸೌಂಡ್ ಹಾಡುಗಳಿಗೆ ಹೆಜ್ಜೆ ಹಾಕಿದರು. ಪರಸ್ಪರ ಬಣ್ಣ ಎರಚಿದರು. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವ ಸಮೂಹ ನೆರೆದಿತ್ತು.
     25ನೇ ವರ್ಷದ ಹೋಳಿ ಸಂಭ್ರಮಾಚರಣೆ ಪ್ರಯುಕ್ತ ವೃತ್ತದಲ್ಲಿ ಬಣ್ಣದ ಲೋಕವೇ ಅನಾವರಣಗೊಂಡಿತ್ತು. ವಿವಿಧ ಬಣ್ಣಗಳ ಬಟ್ಟೆಗಳಿಂದ ವೃತ್ತವನ್ನು ಅಲಂಕರಿಸುವ ಜತೆಗೆ ತುಂತುರು ನೀರಿನ ಹನಿಗಳ ಸ್ಪಿಂಕ್ಲರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
     ಹೋಳಿ ಆಚರಣೆಗೆ ಹೆಸರುವಾಸಿಯಾದ ರಾಮ್ ಆ್ಯಂಡ್ ಕೋ ವೃತ್ತದ ಕಡೆಗೆ ನಾನಾ ದಿಕ್ಕಿನಿಂದ ಜನ ಬಂದಿದ್ದರು. ಸಾವಿರಾರು ಬೈಕ್‌ಗಳು ಪಿ.ಜೆ.ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು. ಒಂದೊಂದು ಬೈಕ್‌ನಲ್ಲಿ ಮೂರ‌್ನಾಲ್ಕು ಜನ ಯುವಕರು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
     ರಸ್ತೆಗಳಲ್ಲಿ ಯುವಕರು ಊದುತ್ತಿದ್ದ ಪೀಪಿಗಳ ಸದ್ದು, ಬೈಕ್‌ಗಳ ಕರ್ಕಶ ಶಬ್ದ, ಹಾರನ್ ನಾಗರಿಕರಿಗೆ ಕಿರಕಿರಿ ತರಿಸಿತು. ಕೆಲವರು ಬಣ್ಣದ ಬದಲು ತಮಗೆ ಬೇಕಾದವರ ಮೇಲೆ ಮೊಟ್ಟೆ ಎಸೆಯುತ್ತಿದ್ದರು. ಮೈಮೇಲಿನ ಶರ್ಟ್‌ಗಳನ್ನು ಬಿಚ್ಚಿ ಎಸೆಯುತ್ತಿದ್ದ ದೃಶ್ಯಗಳು ಕಾಣಸಿಕ್ಕವು.
     ಹೋಳಿ ಪ್ರಯುಕ್ತ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನದವರೆಗೆ ಮುಚ್ಚಿದ್ದವು. ಮಧ್ಯಾಹ್ನದ ಸುಡುಬಿಸಿಲು ತಾಳಲಾರದೆ ಪಾನೀಯ, ಐಸ್‌ಕ್ರೀಂ ಅಂಗಡಿ, ಕಲ್ಲಂಗಡಿ ಹಾಗೂ ಎಳೆನೀರಿಗೆ ಮುಗಿಬಿದ್ದರು. ಕುಡಿಯುವ ನೀರಿನ ಬಾಟಲ್‌ಗಳು ಸಹ ಹೆಚ್ಚು ಮಾರಾಟವಾದವು.
     ಪಿ.ಜೆ.ಬಡಾವಣೆಯ ಹಲವು ರಸ್ತೆಗಳಲ್ಲಿ ವಾಹನಗಳ ದಟ್ಟಣೆಯಿಂದ ಆಗಾಗ ಉಂಟಾಗುತ್ತಿದ್ದ ಸಂಚಾರ ವ್ಯತ್ಯಯವನು ನಿಭಾಯಿಸುವಲ್ಲಿ ಪೊಲೀಸರು ಹರಸಾಹಸಪಡಬೇಕಾಯಿತು. ಎಸ್.ಪಿ.ಉಮಾ ಪ್ರಶಾಂತ್ ಸಹ ನಗರ ಸಂಚಾರ ಕೈಗೊಂಡು ವೀಕ್ಷಣೆ ನಡೆಸಿದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts