More

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕರೊನಾ ಶಂಕೆ

    ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳಲ್ಲಿ ಕರೊನಾ ಸೋಂಕು ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲವಾದರೂ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪಟ್ಟಣದ ಕಂಟೇನ್ಮೆಂಟ್ ವಲಯದ ಇಬ್ಬರಿಗೆ ಪಾಸಿಟಿವ್ ಬಂದಿದ್ದು ಅದರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೂ ಇರುವ ಶಂಕೆಯಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

    ವಿದ್ಯಾರ್ಥಿನಿಗೆ ಸೋಂಕು ಬಂದಿರುವುದು ಖಚಿತವಾದರೆ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರತಿ ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯಂತೆ ಹಾಗೂ ಡೆಸ್ಕ್‌ಗಳ ನಡುವೆ 6 ಅಡಿ ಅಂತರವಿರುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಜಿಲ್ಲೆಯಲ್ಲಿ ಸೋಮವಾರ ಇಬ್ಬರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 297ಕ್ಕೆ ಏರಿದೆ. ನ್ಯಾಮತಿ ತಾಲೂಕು ದೊಡ್ಡೇರಿ ಗ್ರಾಮದ 38 ವರ್ಷದ ಗ್ರಾ.ಪಂ. ಸದಸ್ಯರೊಬ್ಬರಲ್ಲಿ ಶೀತ, ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕಫದ ಮಾದರಿ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ.

    ಅದೇ ತಾಲೂಕಿನ ಚಿನ್ನಿಕಟ್ಟೆ ಗ್ರಾಮದ 63 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇವರು ಬೆಂಗಳೂರಿಗೆ ಹೋಗಿ ಬಂದಿದ್ದಾಗಿ ತಿಳಿದುಬಂದಿದೆ. ಸೋಂಕಿನಿಂದ ಚೇತರಿಸಿಕೊಂಡ 11 ಜನರನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಚೇತರಿಸಿಕೊಂಡವರ ಸಂಖ್ಯೆ 257ಕ್ಕೆ ಏರಿಕೆಯಾಗಿದೆ.


    ರಾತ್ರಿ ಕರ್ಫ್ಯೂ ಜಾರಿ: ರಾಜ್ಯಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆ ವ್ಯಾಪ್ತಿಯಲ್ಲಿ ಕರೊನಾ ಸೋಂಕು ತಡೆಯಲು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಆರ್‌ಪಿಸಿ 1973 ರ ಕಲಂ 144 ರನ್ವಯ ಪ್ರತಿ ದಿನ ರಾತ್ರಿ 8ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.


    ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಅವಶ್ಯವಲ್ಲದ ಚಟುವಟಿಕೆಗಳ, ವ್ಯಕ್ತಿಗಳ ಹಾಗೂ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
    ಜುಲೈ 5ರಿಂದ ಆಗಸ್ಟ್ 2ರವರೆಗಿನ ಭಾನುವಾರಗಳಂದು ಪೂರ್ಣ ದಿನದ ಲಾಕ್‌ಡೌನ್ ಎಂದು ಘೋಷಿಸಲಾಗಿದೆ. ಈ ಅವಧಿಯಲ್ಲಿ ಅಗತ್ಯ ಸರಕು ಸರಂಜಾಮು ಸಾಗಾಣಿಕೆಗೆ ನಿರ್ಬಂಧ ಇರುವುದಿಲ್ಲ.


    ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡಸಂಹಿತೆಯ ಕಲಂ 188, 270 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts