More

    ವಿಕಲಾಂಗರ ಅಭಿವೃದ್ದಿಗೆ ಶೇ. 5ರಷ್ಟು ಅನುದಾನ

    ದಾವಣಗೆರೆ : ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಯಲ್ಲಿರಬೇಕು ಎಂದು ಸರ್ಕಾರ ಶೇ.5ರಷ್ಟು ಅನುದಾನ ಮೀಸಲಿರಿಸಲು ಆದೇಶಿಸಿದ್ದು, ಎಲ್ಲ ಇಲಾಖೆಗಳು ಇವರ ಅಭಿವೃದ್ಧಿಗಾಗಿ ಅನುದಾನ ಮೀಸಲಿರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
     ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಮತ್ತು ಸ್ಪೂರ್ತಿ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ, ಉದ್ಘಾಟಿಸಿ ಮಾತನಾಡಿದರು.
     ಎಲ್ಲರೂ ಅಂಗವಿಕಲರ ಸಮಸ್ಯೆಗಳನ್ನು ಅರಿತು ಸಮಾಜದಲ್ಲಿ ಅವರ ಜೀವನ ಉತ್ತಮಗೊಳಿಸಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.
     ಸರ್ಕಾರದ ಯೋಜನೆಗಳ ಮೂಲಕ ಅಂಗವಿಕಲ ವ್ಯಕ್ತಿಗಳಿಗೆ ಒಂದು ಉತ್ತಮ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಗಳು ಯಾವ ರೀತಿ ಶ್ರಮವಹಿಸಬೇಕು ಎಂಬುದರ ಬಗ್ಗೆ ಒಂದು ದಿನ ಚಿಂತನ, ಮಂತನ ನಡೆಸಿ ಅಂಗವಿಕಲರ ಅವಶ್ಯಕತೆಗಳನ್ನು ಅರಿಯುವುದಕ್ಕೆ ಕಾರ್ಯಾಗಾರ ಉತ್ತಮ ವೇದಿಕೆ ಆಗಲಿದೆ ಎಂದು ತಿಳಿಸಿದರು.
     ಸಮಾಜದಲ್ಲಿ 21ಕ್ಕೂ ಅಧಿಕ ಬಗೆಯ ಅಂಗವಿಕಲ ಹೊಂದಿದ ಜನರನ್ನು ಕಾಣುತ್ತೇವೆ. ಇವರಿಗೆ ಧ್ವನಿಗಾಗಿ ಸರ್ಕಾರ ಯೋಜನೆ ಅನುಷ್ಟಾನ ಮಾಡಬೇಕು ಎಂದರು.
     ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮಾತನಾಡಿ, ಅಂಗವಿಕಲರು ಇತರರಂತೆ ಸ್ವಾವಲಂಬಿಗಳಾಗಿ ಘನತೆಯಿಂದ ಬದುಕಲು ಬೇಕಾದ ಪೂರಕ ವಾತಾವರಣ ಕಲ್ಪಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ಜತೆಗೆ ದೈಹಿಕ ವಿಕಲತೆ, ಬೌದ್ಧಿಕ ವಿಕಲತೆ, ಮಾನಸಿಕ ವರ್ತನೆಗಳು, ದೀರ್ಘಕಾಲಿಕ ನರವೈಜ್ಞಾನಿಕ ಸ್ಥಿತಿಯಿಂದ ಉಂಟಾದ ಅಂಗವೈಕಲ್ಯ, ಬಹುವಿಧ ವಿಕಲತೆ ಅಡಿ ಒಟ್ಟು 21 ಅಂಗವಿಕಲರ ವಿಧಗಳನ್ನು ಪಟ್ಟಿ ಮಾಡಲಾಗಿದೆ ಎಂದು ವಿವರಿಸಿದರು.
     ಅಂಗವೈಕಲ್ಯವಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳ ಮತ್ತು ಕಚೇರಿಗಳಲ್ಲಿ ವ್ಯವಹರಿಸಲು ವಿಕಲಸ್ನೇಹಿ ವ್ಯವಸ್ಥೆ ಅವರ ಹಕ್ಕಾಗಿರುತ್ತದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿಗಳು ವಿಕಲಸ್ನೇಹಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
     ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸ್ಫೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಬಿ. ರೂಪ್ಲನಾಯ್ಕ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ. ಪ್ರಕಾಶ್, ಪಾಲಿಕೆ ಉಪನಿರ್ದೇಶಕಿ ನಳಿನಿ, ರಾಜ್ಯ ಆಯುಕ್ತ ರಾಜಣ್ಣ, ರಾಷ್ಟ್ರೀಯ ದೃಷ್ಟಿದೋಷರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಂ. ವೀರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts