More

    ನೂತನ ಪಿಂಚಣಿ ರದ್ಧತಿಗೆ ಸರ್ಕಾರದ ಜತೆ ಚರ್ಚೆ

    ದಾವಣಗೆರೆ: ನೂತನ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆಯ ಯೋಜನೆ ಜಾರಿ ಸಂಬಂಧ ಸರ್ಕಾರದ ಜತೆ ಮಾತುಕತೆ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
    ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಉದ್ದೇಶಿಸಿ ಮಾತನಾಡಿದರು.

    ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ, ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಿ, ತಾರತಮ್ಯ ಸರಿಪಡಿಸಬೇಕು. ಈ ಎರಡೂ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಹೋರಾಟ ರೂಪರೇಷೆ ಸಿದ್ಧಪಡಿಸಲಾಗುವುದು. ಇದಕ್ಕೆ ಕಾಲ ಪಕ್ವವಾಗಿಲ್ಲ. ಕೋವಿಡ್ ನಿಯಂತ್ರದ ಬಳಿಕ ಗಮನ ಹರಿಸಲಾಗುವುದು ಎಂದರು.

    ಸಂಘದಲ್ಲಿ ಆರ್ಥಿಕ ಮಿತವ್ಯಯ ಮುಖ್ಯ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಂಘದ ಪದಾಧಿಕಾರಿಗಳು ಸರ್ಕಾರದ ಹಣ, ಸಾರ್ವಜನಿಕರದು ಹಾಗೂ ದೇವರ ಹುಂಡಿ ಎಂದು ಭಾವಿಸಿ ನಿರ್ವಹಣೆ ಮಾಡಬೇಕು. ಸಂಘದ ಒಂದು ರೂ. ದುರುಪಯೋಗವಾಗಬಾರದು. ಅಧಿಕಾರ ದುರ್ಬಳಕೆ, ಸ್ವೇಚ್ಛಾಚಾರವಾಗಬಾರದು ಎಂದರು.

    ನೌಕರರ ಸಂಘದ ಬೈಲಾ ನಿಯಮಗಳಿಗೆ ಅಮೂಲಾಗ್ರ ತಿದ್ದುಪಡಿ ತರಬೇಕೆಂದು 2013ರಿಂದಲೂ ಹೋರಾಟ ಮಾಡಿದ್ದರೂ ಫಲಪ್ರದವಾಗಿಲ್ಲ. ನೌಕರರ ಸಂಘದ ಚೊಚ್ಚಲ ವಿಶೇಷ ಮಹಾಸಭೆಯಲ್ಲಿ ತಿದ್ದುಪಡಿ ಉಪಸಮಿತಿ ರಚಿಸಿದ ವರದಿಯನ್ನು ಮಂಡಿಸಲಾಗುವುದು ಎಂದು ತಿಳಿಸಿದರು.

    9 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಭವನ ನವೀಕರಣ ಕಾಮಗಾರಿ ನಡೆಯುತ್ತಿದೆ. ಇದರ ಉದ್ಘಾಟನೆಗೆ ಕ್ರಮ ವಹಿಸುವುದು. ಕೆಲವು ಜಿಲ್ಲೆಗಳ ಸಂಘಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಸಭೆ ಅನುಮೋದನೆ ನೀಡಲಿದೆ. ಪದಾಧಿಕಾರಿಗಳು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.

    ಡಿಸಿ ಮಹಾಂತೇಶ ಬೀಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಜಾರಿಗೊಳಿಸಲು ಸಂಘದ ಅಧ್ಯಕ್ಷರು ಕಾರ್ಯ ನಿರ್ವಹಿಸಲಿ ಎಂದರು.

    ಕರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೋವಿಡ್ ಸಂದಿಗ್ಧದ ಯುದ್ಧದಲ್ಲಿ ಸರ್ಕಾರಿ ನೌಕರರು ಜೀವ ಪಣಕ್ಕಿಟ್ಟು ಜನಸೇವೆ ಮಾಡುತ್ತಿದ್ದಾರೆ. ನೌಕರರು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಜನಸಂದಣಿ ಇರುವ ಕಡೆಗಳಲ್ಲಿ ಹೆಚ್ಚು ಭಾಗವಹಿಸದಿರಿ ಎಂದು ಕಿವಿಮಾತು ಹೇಳಿದರು.

    ಸಂಘದ ಮೊದಲ ವರ್ಷದ ಪ್ರಗತಿ ಕುರಿತ ‘ಸಾಧನಾ ಪಥ’ ಪುಸ್ತಕ, ಸನೌಕರರ ಧ್ವನಿ ಶೀರ್ಷಿಕೆಯ ಯೂಟೂಬ್ ಚಾನಲ್, ಜನನಾಯಕ- ಧ್ವನಿಸುರುಳಿಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.

    ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ಪಾಟೀಲ, ಖಜಾಂಚಿ ಆರ್. ಶ್ರೀನಿವಾಸ್, ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ, ಮಲ್ಲಿಕಾರ್ಜುನ ಜಿ,ಬಳ್ಳಾರಿ, ಟಿ.ಶ್ರೀನಿವಾಸ್. ಅಪ್ಪಾಜಿಗೌಡ, ಎಚ್.ಎಸ್.ಹೇಮಲತಾ, ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಕೆ.ಮಂಜುನಾಥ್, ಡಾ.ಡಿ.ಉಮೇಶ್ ಸೇರಿ ವಿವಿಧ ಜಿಲ್ಲೆಗಳ ಅಧ್ಯಕ್ಷರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts