More

    ಶಿಕ್ಷಣ ಮತ್ತೊಬ್ಬರ ಬಾಳಿಗೂ ಬೆಳಕಾಗಲಿ

    ದಾವಣಗೆರೆ : ಶಿಕ್ಷಣವು ಬೆಳಕಿದ್ದಂತೆ. ಅದು ನಮ್ಮೊಂದಿಗೆ ಮತ್ತೊಬ್ಬರ ಬಾಳಿಗೂ ಬೆಳಕು ನೀಡುವಂತಾಗಬೇಕು ಎಂದು ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಳ್ ಹೇಳಿದರು.
     ದುಮ್ಮಿ ಹುಸೇನ್‌ಸಾಬ್ ಚಾರಿಟೆಬಲ್ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಶಿಕ್ಷಣ ನಮ್ಮ ಜ್ಞಾನದ ಜತೆಗೆ ಹೃದಯವನ್ನೂ ಬೆಳಗಬೇಕು. ಯಾವುದೇ ಸ್ವಾರ್ಥ ಹಾಗೂ ದ್ವೇಷ ಹೊಂದದೆ ಸಮಾಜದ ಬಡವರು, ಅಸಹಾಯಕರೊಂದಿಗೆ ಬದುಕುವವರೇ ನಿಜವಾದ ವಿದ್ಯಾವಂತರು ಎಂದು ತಿಳಿಸಿದರು.
     ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಆಗಿದ್ದೇವೆ. ಜೀವನದಲ್ಲಿ ಬರುವ ಎಂತಹ ಸವಾಲನ್ನೂ ಸ್ವೀಕರಿಸಬೇಕು. ಸೋಲು ಎದುರಾದರೂ ಎದುರಿಸಲು ಸಿದ್ಧರಿರಬೇಕು. ಸೋತರೆ ಪ್ರಯತ್ನ ನಿಲ್ಲಿಸಬಾರದು. ಸಕಾರಾತ್ಮಕ ಆಲೋಚನೆಯಿಂದ ಮುನ್ನಡೆಯಬೇಕು. ನಿಧಾನ ಹಾಗೂ ಸ್ಥಿರತೆಯಿಂದ ಪ್ರಯತ್ನಶೀಲರಾದರೆ ಸುಲಭವಾಗಿ ಗುರಿ ತಲುಪಬಹುದು. ಆದರೆ, ಗುರಿಯಂತೆ ಹಾದಿಯೂ ಮುಖ್ಯವಾಗಿರಬೇಕು ಎಂದರು.
     ವಿದ್ಯಾರ್ಥಿಗಳು ಅಧಿಕ ಅಂಕ ಪಡೆಯುವುದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದುಕೊಳ್ಳುವುದು ಮಾತ್ರವೇ ಗೆಲುವಿನ ಸಂಕೇತವಲ್ಲ. ಯಶಸ್ಸಿನ ಜತೆಗೆ ಶ್ರೇಷ್ಠತೆ ಹೊಂದಲು ಪ್ರಯತ್ನಿಸಬೇಕು. ಸಮಾಜದಲ್ಲಿ ನೆನಪಿಸಿಕೊಳ್ಳುವ ಹಾಗೆ ಹೆಜ್ಜೆ ಗುರುತುಗಳನ್ನು ಮೂಡಿಸಬೇಕು ಎಂದರು.
     ಟ್ರಸ್ಟ್‌ನ ಇಮ್ತಿಯಾಜ್ ಹುಸೇನ್ ಮಾತನಾಡಿ, ಚುನಾವಣೆ ಸಮಯದಲ್ಲಿ ನಮ್ಮ ಸಮಾಜದ ಜನಸಂಖ್ಯೆ ಎಷ್ಟಿದೆ ಎಂಬುದನ್ನು ಹೇಳುತ್ತೇವೆ. ಆದರೆ, ಎಷ್ಟು ಜನ ವಿದ್ಯಾವಂತರಿದ್ದಾರೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಪ್ರಸ್ತುತ ಸರ್ಕಾರ ಹಾಗೂ ಸಂಘ-ಸಂಸ್ಥೆಗಳ ಸೌಲಭ್ಯ ಪಡೆದು ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
     ಟ್ರಸ್ಟ್ ಅಧ್ಯಕ್ಷ ಡಾ.ಅಬ್ದುಲ್ ಬುಡನ್ ದುಮ್ಮಿ ಮಾತನಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2021ರಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ಚಿನ್ನದ ಪದಕ ನೀಡಲು ದತ್ತಿ ನಿಧಿ ನೀಡಲಾಗಿದೆ ಎಂದು ಹೇಳಿದರು.
     ಸಾಮಾಜಿಕ ಕಾರ್ಯಕರ್ತ ಹೆಲ್ಪ್‌ಲೈನ್ ಸುಭಾನ್, ಟ್ರಸ್ಟ್‌ನ ನಯಾಜ್ ದುಮ್ಮಿ ಇದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts