More

    ಹನಿ ನೀರಾವರಿ 5.32 ಕೋಟಿ ರೂ. ಸಬ್ಸಿಡಿ ಬಾಕಿ

    ರಮೇಶ ಜಹಗೀರದಾರ್ ದಾವಣಗೆರೆ: ಕಳೆದ ವರ್ಷ ಜಿಲ್ಲೆಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿದ 1 ಸಾವಿರಕ್ಕೂ ಅಧಿಕ ರೈತರಿಗೆ 5.32 ಕೋಟಿ ರೂ. ಸಬ್ಸಿಡಿ ಬಾಕಿ ಬರಬೇಕಿದೆ.

    ತೋಟಗಾರಿಕೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಸರ್ಕಾರ ಹನಿ ನೀರಾವರಿ ಸಬ್ಸಿಡಿಯನ್ನು ನೀಡುತ್ತಿದೆ. ಅರೆ ಮಲೆನಾಡು ಪ್ರದೇಶದಲ್ಲಿ ಬರುವ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ಮಾತ್ರ ಅಡಕೆ ಬೆಳೆಗೆ ಹನಿ ನೀರಾವರಿ ಅಳವಡಿಸಲು ಅವಕಾಶವಿದೆ.

    ಇನ್ನುಳಿದ ತಾಲೂಕುಗಳಲ್ಲಿ ಕಂದು ಬಾಳೆ, ಅಂಗಾಂಶ ಬಾಳೆ, ಪಪ್ಪಾಯ, ದಾಳಿಂಬೆ, ನುಗ್ಗೆ, ಈರುಳ್ಳಿ ಹಸಿ ಮೆಣಸಿನಕಾಯಿ, ಟೊಮ್ಯಾಟೋ ಮುಂತಾದ ತರಕಾರಿ ಬೆಳೆಗಾರರು ಹಾಗೂ ಹರಿಹರ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ವೀಳ್ಯೆದೆಲೆ ಬೆಳೆಗೂ ಈ ಸೌಲಭ್ಯ ಲಭ್ಯವಿದೆ.

    ಜಿಲ್ಲೆಯಲ್ಲಿ 2010-11ರಿಂದ ಇಲ್ಲಿವರೆಗೆ 10 ವರ್ಷಗಳಲ್ಲಿ 33,888 ಫಲಾನುಭವಿಗಳು 33,878 ಹೆಕ್ಟೇರ್‌ನಲ್ಲಿ ಹನಿ ನೀರಾವರಿ ಯೋಜನೆಯಡಿ ಪ್ರದೇಶ ವಿಸ್ತರಣೆ ಮಾಡಿಕೊಂಡಿದ್ದಾರೆ. 2019-20ರಲ್ಲಿ ಹನಿ ನೀರಾವರಿ ಅಳವಡಿಸಿಕೊಂಡ 2800 ರೈತರಿಗೆ ಸರ್ಕಾರದಿಂದ 14.9 ಕೋಟಿ ರೂ. ಸಬ್ಸಿಡಿ ಬರಬೇಕಿತ್ತು. ಅನುದಾನದ ಕೊರತೆಯಿಂದ ಪಾವತಿ ವಿಳಂಬವಾಗಿತ್ತು.

    ದಾವಣಗೆರೆ ತಾಲೂಕಿನಲ್ಲಿ 3.45 ಕೋಟಿ, ಚನ್ನಗಿರಿ 3.15 ಕೋಟಿ, ಹೊನ್ನಾಳಿ 4.43 ಕೋಟಿ, ಹರಿಹರ 92 ಲಕ್ಷ ಮತ್ತು ಜಗಳೂರು ತಾಲೂಕಿನಲ್ಲಿ 2.39 ಕೋಟಿ ರೂ. ಸಬ್ಸಿಡಿ ಬರುವುದು ಬಾಕಿಯಿತ್ತು. ಆ ಪೈಕಿ ಈ ವರ್ಷ 8.77 ಕೋಟಿ ರೂ. ಈಗಾಗಲೇ ರೈತರಿಗೆ ಪಾವತಿಸಲಾಗಿದೆ. ಕೆಲವೇ ದಿನಗಳಲ್ಲಿ ಬಾಕಿ ಸಬ್ಸಿಡಿ ಮೊತ್ತವೂ ಸರ್ಕಾರದಿಂದ ಬಿಡುಗಡೆಯಾಗಲಿದ್ದು, ರೈತರಿಗೆ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

    ಮಾರ್ಗಸೂಚಿ ಬದಲಾವಣೆ: ಹನಿ ನೀರಾವರಿ ಯೋಜನೆಗೆ 2020-21ನೇ ಸಾಲಿನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದುವರೆಗೆ ಕಂಪನಿಗಳ ವಿತರಕರೇ ಹನಿ ನೀರಾವರಿ ಪರಿಕರಗಳನ್ನು ತರಿಸಿ ಬಿಲ್ ಮಾಡುತ್ತಿದ್ದರು. ಈ ವರ್ಷದಿಂದ ಕಂಪನಿಯವರಿಂದಲೇ ಬಿಲ್ ಪಡೆಯಬೇಕು ಎಂಬ ನಿಯಮ ಮಾಡಲಾಗಿದೆ. ಇದಕ್ಕೆ ವಿತರಕರಿಂದ ವಿರೋಧ ವ್ಯಕ್ತವಾಗಿದೆ. ರೈತರು ಕಾರ್ಯಾದೇಶ ಪಡೆಯಬೇಕಾದರೆ ಶೇ.10ರಷ್ಟು ಮೊತ್ತವನ್ನು ಕಂಪನಿಗೆ ಪಾವತಿಸಬೇಕಾಗುತ್ತದೆ.

    ಹನಿ ನೀರಾವರಿ ಎಲ್ಲ ತೋಟಗಾರಿಕೆ ಬೆಳೆಗಳಿಗೆ ಶೇ 90 ಸಬ್ಸಿಡಿ ಇದೆ. ರೈತರು ಇಲಾಖೆ ಸಂಪರ್ಕ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು.
    > ಲಕ್ಷ್ಮಿಕಾಂತ ಬೊಮ್ಮನ್ನರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts