More

    ಅಭಿವೃದ್ಧಿಗೆ ಅಂಕಿ ಅಂಶಗಳೇ ಅಡಿಪಾಯ

    ದಾವಣಗೆರೆ: ಅಂಕಿ ಅಂಶಗಳು ಅಭಿವೃದ್ಧಿಗೆ ಅಡಿಪಾಯವಾಗಿದ್ದು ಈ ಕ್ಷೇತ್ರದಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಸಂಖ್ಯಾಶಾಸ್ತ್ರಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಜನ್ಮ ದಿನ ಹಾಗೂ 14ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈ ಬಾರಿ ಸುಸ್ಥಿರ ಅಭಿವೃದ್ಧಿ ಗುರಿ-03 ರ ವಿಷಯ ‘ಎಲ್ಲರಿಗೂ ಎಲ್ಲ ವಯೋವೃದ್ಧರಲ್ಲಿ ಆರೋಗ್ಯಕರ ಜೀವನವನ್ನು ಖಾತ್ರಿಪಡಿಸಿ, ಯೋಗಕ್ಷೇಮವನ್ನು ಉತ್ತೇಜಿಸುವುದು’ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ-05 ರ ವಿಷಯ ‘ಲಿಂಗ ಸಮಾನತೆಯನ್ನು ಸಾಧಿಸಿ ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವುದು’ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

    ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಯಾವುದೇ ರಂಗದಲ್ಲಿ ಅಭಿವೃದ್ಧಿ ಕಾಣಬೇಕಿದ್ದರೆ ಅಂಕಿ ಅಂಶಗಳ ಅವಶ್ಯಕತೆ ಇರುತ್ತದೆ. ಪ್ರಸ್ತುತ ಕೋವಿಡ್ 19 ಪರಿಸ್ಥಿತಿಯನ್ನು ದಿಟ್ಟವಾಗಿ ಮತ್ತು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡುತ್ತಿರುವುದು ಈ ಅಂಕಿ ಅಂಶಗಳೇ ಎಂದರು.

    ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಅಂಕಿ ಅಂಶಗಳೇ ಯಾವುದೇ ಯೋಜನೆಗೆ ಅಡಿಪಾಯ. ನಿಖರ ಅಂಕಿ-ಅಂಶಗಳಿಂದ ಯಾವುದೇ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅಭಿವೃದ್ಧಿ ಮತ್ತು ಯಶಸ್ಸು ಸಾಧ್ಯ ಎಂದರು.

    ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ಮಾತನಾಡಿದರು. ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್‌ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಜಿ.ಪಂ.ನ ಅಧಿಕಾರಿ ಶಾರದಾ ಜಿ. ದೊಡ್ಡಗೌಡರ್, ಜಗಳೂರು ಇಒ ಮಲ್ಲಾನಾಯಕ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಏಕನಾಥ, ಸಾಮಾಜಿಕ ಭದ್ರತೆ ಶಾಖೆಯ ಸಹಾಯಕ ನಿರ್ದೇಶಕಿ ನೀಲಮ್ಮ ಇದ್ದರು. ರಂಜಿತಾ ಪ್ರಾರ್ಥಿಸಿದರು, ಮಂಗಳಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts