ದಾವಣಗೆರೆ: ಐ.ಎ.ಎಸ್. ಅಧಿಕಾರಿಗಳ ದುರಾಡಳಿತದಿಂದ ನೊಂದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಅವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿ ಹೋರಾಟಕ್ಕಿಳಿದಿದ್ದು, ಆಟೋ ಚಾಲಕರಾಗಿ ಹೊಸ ವೃತ್ತಿಯನ್ನು ಕಂಡುಕೊಂಡಿದ್ದಾರೆ.
ತಾಲೂಕಿನ ಬಾಡಾ ಗ್ರಾಮದವರಾದ ಡಾ. ರವೀಂದ್ರನಾಥ ಎಂ.ಎಚ್. 24 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
ಜಗಳೂರು ತಾಲೂಕು ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 17 ವರ್ಷ ಸೇವೆ ಸಲ್ಲಿಸಿದ ಇವರು, ನಂತರ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದರು. ಚಿಕ್ಕಮಗಳೂರಿನಲ್ಲಿ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಯಾಗಿ 3 ವರ್ಷ ಸೇವೆ ಸಲ್ಲಿಸಿದರು.
2017ರಲ್ಲಿ ಬಳ್ಳಾರಿ ಜಿಲ್ಲಾ ಆರ್ಸಿಎಚ್ ಅಧಿಕಾರಿಯಾಗಿ ನೇಮಕಗೊಂಡರು. ಅಲ್ಲಿ ಸೇವೆಯಲ್ಲಿರುವಾಗಲೇ ಜಿ.ಪಂ. ಸಿಇಒ ಒಬ್ಬರು ತಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿ ತೊಂದರೆ ಕೊಟ್ಟರು ಎಂದು ಡಾ. ರವೀಂದ್ರನಾಥ್ ಆರೋಪಿಸಿದರು.
ಅವರು ಹೇಳಿದ ವ್ಯಕ್ತಿಯನ್ನು ವೈದ್ಯರನ್ನಾಗಿ ನೇಮಕಾತಿ ಮಾಡಲಿಲ್ಲ (ಮಾರ್ಗಸೂಚಿ ಪ್ರಕಾರ ಅವರ ನೇಮಕಾತಿಗೆ ಅವಕಾಶವಿರಲಿಲ್ಲ) ಎಂಬ ಕಾರಣ ಮುಂದಿಟ್ಟುಕೊಂಡು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದರು. ನನ್ನನ್ನು ವರ್ಗಾವಣೆ ಮಾಡಲು ಪ್ರಯತ್ನಿಸಿದರು. ನಂತರ ಬಂದ ಸಿಇಒ ಅವರೂ ಟೆಂಡರ್ ಒಂದರ ತಾಂತ್ರಿಕ ಬಿಡ್ ವಿಚಾರದಲ್ಲಿ ತಮ್ಮ ಬಗ್ಗೆ ತಪ್ಪು ವರದಿ ನೀಡಿದರು.
2019ರ ಜೂನ್ನಲ್ಲಿ ತಮ್ಮನ್ನು ಅಮಾನತು ಮಾಡಿದರು. ಇದರ ವಿರುದ್ಧ ಕೆಎಟಿ ಮೊರೆ ಹೋದೆ. ಅಕ್ಟೋಬರ್ನಲ್ಲಿ ತೀರ್ಪು ನನ್ನ ಪರವಾಗಿ ಬಂದಿತು. ಡಿಸೆಂಬರ್ನಲ್ಲಿ ಸೇಡಂ ತಾಲೂಕಿಗೆ ಹಿರಿಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿದರು.
ಡಿಸೆಂಬರ್ 19ಕ್ಕೆ ಅಲ್ಲಿ ವರದಿ ಮಾಡಿಕೊಂಡು 20 ರಿಂದ ರಜೆ ಹಾಕಿದೆ. ಮತ್ತೊಮ್ಮೆ ಕೆಎಟಿ ಮೊರೆ ಹೋದೆ. ಜನವರಿ 8ಕ್ಕೆ ತೀರ್ಪು ಪ್ರಕಟವಾಯಿತು. ಒಂದು ತಿಂಗಳಲ್ಲಿ ಇವರಿಗೆ ಜಿಲ್ಲಾಮಟ್ಟದ ಹುದ್ದೆ ನೀಡುವಂತೆ ಆದೇಶವಾಯಿತು. ಮೇನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ದಾಖಲಿಸಿದೆ. ಇದುವರೆಗೂ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಡಾ. ರವೀಂದ್ರನಾಥ್ ವಿವರಿಸಿದರು.
ಇಲಾಖೆಯಲ್ಲಿ ಹಿರಿತನವನ್ನು ಪರಿಗಣಿಸುತ್ತಿಲ್ಲ. ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ವಿರೋಧಿಸಿ ಹೋರಾಟಕ್ಕೆ ಇಳಿದಿರುವೆ. ಹದಿನೈದು ತಿಂಗಳಿಂದ ತಮಗೆ ವೇತನ ನೀಡಿಲ್ಲ ಎಂದು ದೂರಿದರು.
ಈಗ ಹೊಸ ಆಟೋ ಖರೀದಿಸಿರುವ ಅವರು, ಜೀವನ ನಿರ್ವಹಣೆಗಾಗಿ ನಗರದಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ. ಆಟೋದ ಮೇಲೆ ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು ಬರೆದುಕೊಂಡಿದ್ದಾರೆ.