More

    ಜುಲೈ 8 ರಂದು ರಾಷ್ಟ್ರೀಯ ಲೋಕ್ ಅದಾಲತ್

    ದಾವಣಗೆರೆ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 8 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
     ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಿಯಾಗಬಹುದಾದ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಕೈಗೆತ್ತಿಕೊಂಡು ತ್ವರಿತವಾಗಿ ಮತ್ತು ವೆಚ್ಚವಿಲ್ಲದೆ ನ್ಯಾಯದಾನ ಮಾಡುವ ವ್ಯವಸ್ಥೆ ಇದಾಗಿದೆ ಎಂದು ತಿಳಿಸಿದರು.
     ರಾಜಿಯಾಗಬಲ್ಲ ಸಿವಿಲ್, ಕ್ರಿಮಿನಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ, ಚೆಕ್ ಅಮಾನ್ಯ, ಭೂ ಸ್ವಾಧೀನ ಪರಿಹಾರ, ಬ್ಯಾಂಕ್ ಸಾಲ ವಸೂಲಾತಿ, ಅಕ್ರಮ ಮರಳು ಸಾಗಣೆ, ವೇತನ ಭತ್ಯೆ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ, ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಪ್ರಕರಣಗಳನ್ನು ಇಲ್ಲಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
     ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳನ್ನು ವಿಲೇ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಅಂದು ಎಲ್ಲ ತಾಲೂಕುಗಳಲ್ಲೂ ಈ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
     ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದೆ ಇರುವವರು ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ಕುಮಾರ್ ಮಾತನಾಡಿ, ಲೋಕ್ ಅದಾಲತ್ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದ್ದು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.
     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ನ್ಯಾಯಾಲಯದ ಆಡಳಿತಾಧಿಕಾರಿ ಶ್ರೀನಿವಾಸ್ ಇದ್ದರು.
     …
     ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 08192-296364, ತಾಲೂಕು ಕಾನೂನು ಸೇವಾ ಸಮಿತಿ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195, ಜಗಳೂರು 08196-227600 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
     …
     * 35787 ಪ್ರಕರಣಗಳು ಬಾಕಿ
     ಜಿಲ್ಲೆಯಲ್ಲಿ ಒಟ್ಟು 35787 ಪ್ರಕರಣಗಳು ಬಾಕಿ ಇದ್ದು ಅವುಗಳ ಪೈಕಿ ಅಂದಾಜು 30 ಸಾವಿರ ಕೇಸ್‌ಗಳು ರಾಜಿಗೆ ಯೋಗ್ಯವಾಗಿವೆ ಎಂದು ಹೇಳಿದರು.
     ದಾವಣಗೆರೆಯಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 1313, ಜಿಲ್ಲಾ ಹೆಚ್ಚುವರಿ ಸೆಷೆನ್ಸ್ ಕೋರ್ಟ್‌ನಲ್ಲಿ 1776, ಹೆಚ್ಚುವರಿ ಸೆಷೆನ್ಸ್ ಕೋರ್ಟ್‌ನಲ್ಲಿ 1308, ಹೆಚ್ಚುವರಿ ಸೆಷೆನ್ಸ್ ಕೋರ್ಟ್ 1ರಲ್ಲಿ 192, ಕೌಟುಂಬಿಕ ನ್ಯಾಯಾಲಯದಲ್ಲಿ 1999, ಸಿಜೆಎಂ ಕೋರ್ಟ್‌ನಲ್ಲಿ 1296, ಮೊದಲ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಕೋರ್ಟ್ 1308, 2ನೇ ಜೆಎಂಎಫ್‌ಸಿ ಕೋರ್ಟ್ 873, 3ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ 1184, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಕೋರ್ಟ್‌ನಲ್ಲಿ 1267, ಒಂದನೇ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್ 2588, 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್ 2846, 3ನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ 2520, 4ನೇ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್‌ನಲ್ಲಿ 1441 ಪ್ರಕರಣಗಳಿವೆ.
     ಹರಿಹರದ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ 2499, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೆಎಂಎಫ್‌ಸಿ ಹರಿಹರ 1280, 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಹರಿಹರ 646, ಸೀನಿಯರ್ ಸಿವಿಲ್ ಜಡ್ಜ್ ಕೋರ್ಟ್ ಚನ್ನಗಿರಿ 766, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೆಎಂಎಫ್‌ಸಿ ಚನ್ನಗಿರಿ 693, 1ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಚನ್ನಗಿರಿ 1013, 2ನೇ ಹೆಚ್ಚುವರಿ ಸಿವಿಲ್ ಜೆಎಂಎಫ್‌ಸಿ ಚನ್ನಗಿರಿ 770, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಹೊನ್ನಾಳಿ 2687, ಹೆಚ್ಚುವರಿ ಸಿವಿಲ್ ಜಡ್ಜ್ ಜೆಎಂಎಫ್‌ಸಿ ಹೊನ್ನಾಳಿ 1623, ಜಗಳೂರು ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ 1169 ಪ್ರಕರಣಗಳು ಬಾಕಿ ಇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts