More

    ಇಂಗ್ಲಿಷ್ ಲಾಲಸೆಗೆ ತಾಯಿಭಾಷೆ ಕಡೆಗಣಿಸದಿರಿ

    ದಾವಣಗೆರೆ: ಆಂಗ್ಲ ಮಾಧ್ಯಮದ ವ್ಯಾಮೋಹದಲ್ಲಿ ತಾಯಿಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಡಿಡಿಪಿಐ ಆರ್.ಪರಮೇಶ್ವರಪ್ಪ ತಿಳಿಸಿದರು.

    ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಭಾನುವಾರ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಎಲ್ಲಾ ಕ್ಷೇತ್ರಗಳಲ್ಲೂ ವ್ಯವಹಾರಿಕವಾಗಿ ಕಂಡುಬರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಎದುರಿಸುವುದು ಕನ್ನಡದಿಂದ ಸಾಧ್ಯವಿಲ್ಲ ಎಂಬ ಮನೋಭಾವನೆ ಅನೇಕರಲ್ಲಿದೆ. ಇದಕ್ಕಾಗಿ ಅನೇಕ ಪಾಲಕರು ಆಂಗ್ಲ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.

    ತಾಯಿಭಾಷೆಯಲ್ಲಿ ಮಾತ್ರ ಸದೃಢ ಮತ್ತು ಸುಲಲಿತವಾಗಿ ಮಾತನಾಡಲು ಸಾಧ್ಯವಿದೆಯೆ ಹೊರತಾಗಿ ಅನ್ಯ ಭಾಷೆಯಲ್ಲಿ ಆಗದು. ಕೆಲವು ಯೂರೋಪಿಯನ್ ರಾಷ್ಟ್ರಗಳು ಇಂಗ್ಲಿಷ್ ಅನ್ನು ಒಪ್ಪಿಕೊಳ್ಳದೆ ತಮ್ಮ ಭಾಷೆಯನ್ನೇ ಅಭಿವೃದ್ಧಿಪಡಿಸಿ ಉನ್ನತ ಶಿಕ್ಷಣ ನೀಡುತ್ತಿವೆ ಎಂದು ಹೇಳಿದರು.

    ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡವನ್ನು ಉಳಿಸಿ ಬೆಳೆಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬಿತ್ತುವ ಗುರುತರ ಹೊಣೆ ನಮ್ಮ ಮೇಲಿದೆ. ಬಡತನದಲ್ಲೂ ಓದಿದವರು ಪೂರ್ಣ ಅಂಕ ಗಳಿಸಿದ್ದಾರೆ. ಇದರಿಂದಾಗಿ ಇಂತಹ ಪ್ರಶಸ್ತಿಗಳ ಮೌಲ್ಯ ಹೆಚ್ಚಲಿದೆ. ನಿಜವಾದ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

    ಡಯಟ್ ಪ್ರಾಚಾರ್ಯ ಎಚ್.ಕೆ.ಲಿಂಗರಾಜ್ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿ ಭಾರತದ ಮೂಲ ಬೇರುಗಳು. ಇದರಿಂದಲೇ ದೇಶ ಉನ್ನತವಾಗಿ ಬೆಳೆದಿದೆ. ಹತ್ತಿಗಿರಣಿಗಳು ನಶಿಸಿರುವ ದಾವಣಗೆರೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆಗಳು ಬೆಳೆದಿವೆ. ಹೀಗಾಗಿ ಈ ನಗರವನ್ನು ಕೇಂಬ್ರಿಡ್ಜ್ ಆಫ್ ಕರ್ನಾಟಕ ಎಂದು ಕರೆಯಬಹುದು ಎಂದು ಹೇಳಿದರು.

    ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ತೇಜಸ್ವಿನಿ ಪ್ರಕಾಶ್, ಕಲಾಕುಂಚ ಅಧ್ಯಕ್ಷ ಕೆ.ಎಚ್.ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್ ಶೆಣೈ, ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ಇದ್ದರು.

    ದಾವಣಗೆರೆಯ ಅಂಧ ಮಕ್ಕಳ ಶಾಲೆಯ ಜಿ.ಟಿ.ಕಿರಣ್ ಸೇರಿ 195 ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ ಪ್ರಶಸ್ತಿ, 158 ವಿದ್ಯಾರ್ಥಿಗಳಿಗೆ ಸರಸ್ವತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts