More

    ವರ್ಷದ ಬೆಳೆಗೆ ಸಾಕೆ ವಾರದ ಗಡುವು?

    ದಾವಣಗೆರೆ : ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಸಿಗದ ಕಾರಣ ರಾಜ್ಯದ 5 ಜಿಲ್ಲೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೋಟಗಾರಿಕಾ ಬೆಳೆಗಾರರನ್ನು ತಲುಪಲು ಸಾಧ್ಯವಾಗಿಲ್ಲ.
     ದಾವಣಗೆರೆ, ಹಾಸನ, ತುಮಕೂರು ಮತ್ತು ಉಡುಪಿ ಜಿಲ್ಲೆಗಳಿಗೆ ಇನ್ನಷ್ಟು ಸಮಯ ದೊರೆತಿದ್ದರೆ ರೈತರ ನೋಂದಣಿ ಸಂಖ್ಯೆಯೂ ಹೆಚ್ಚಾಗುತ್ತಿತ್ತು, ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ರಿಂದ 30ರ ವರೆಗೆ ನೋಂದಣಿ ಪ್ರಕ್ರಿಯೆ ನಡೆದು ಜುಲೈ 1ರಿಂದ ಅನ್ವಯವಾಗುವಂತೆ ಯೋಜನೆ ಜಾರಿಯಾಗುತ್ತಿತ್ತು. ಆಗ ರೈತರಿಗೆ ಒಂದು ತಿಂಗಳಷ್ಟು ಕಾಲಾವಕಾಶ ದೊರೆತು, ಹೆಚ್ಚು ಬೆಳೆಗಾರರು ಅದರ ವ್ಯಾಪ್ತಿಗೆ ಬರುತ್ತಿದ್ದರು.
     ಆದರೆ ಈ ಸಾಲಿನಲ್ಲಿ ಪ್ರಕ್ರಿಯೆ ವಿಳಂಬವಾಗಿದೆ. ಚುನಾವಣಾ ನೀತಿ ಸಂಹಿತೆ, ಅದಾದ ನಂತರ ಸರ್ಕಾರ ರಚನೆಯಾಗಿ, ಅನುಮೋದನೆ ದೊರೆತು ಟೆಂಡರ್ ಪ್ರಕ್ರಿಯೆ ಆಗಲು ತಡವಾಯಿತು.
     ದಾವಣಗೆರೆ, ಹಾಸನ, ಕೋಲಾರ, ತುಮಕೂರು, ಉಡುಪಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಿದೆ. ಈ ಪೈಕಿ ವಿಜಯಪುರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನೋಂದಣಿ ಮಾಡಿಸಿದ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟೂ ಆಗಿಲ್ಲ.
     ಜುಲೈ 7ಕ್ಕೆ ಘೋಷಣೆಯಾದ ಯೋಜನೆಯಡಿ ನೋಂದಣಿಗೆ ಜುಲೈ 15 ಕೊನೆಯ ದಿನವಾಗಿತ್ತು. ರೈತರಿಗೆ ಸಿಕ್ಕಿದ್ದು ಕೇವಲ ಒಂದು ವಾರದ ಅವಧಿ. ಮಾವು ಬೆಳೆಗೆ ಮಾತ್ರ ಜುಲೈ 31ರ ವರೆಗೆ ಅವಕಾಶವಿದೆ.
     * ಎಲ್ಲೆಲ್ಲಿ ಹೇಗಿದೆ ಸ್ಥಿತಿ
     ದಾವಣಗೆರೆ ಜಿಲ್ಲೆಯದೇ ಉದಾಹರಣೆ ತೆಗೆದುಕೊಂಡರೆ ಅಡಕೆ, ವೀಳ್ಯದೆಲೆ, ಮಾವು, ಕರಿಮೆಣಸು ಮತ್ತು ದಾಳಿಂಬೆ ಬೆಳೆಗಳಿಗೆ ಕಳೆದ ವರ್ಷ 9862 ರೈತರು 7674.23 ಹೆಕ್ಟೇರ್ ಪ್ರದೇಶಕ್ಕೆ ಹವಾಮಾನ ಆಧಾರಿತ ಬೆಳೆವಿಮೆ ಮಾಡಿಸಿದ್ದರು. ಈ ವರ್ಷ ಕೇವಲ 4276 ರೈತರು 4284.41 ಹೆಕ್ಟೇರ್‌ಗೆ ನೋಂದಣಿ ಮಾಡಿಸಿದ್ದಾರೆ.
     ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷ 11,632 ರೈತರು 9686 .69 ಹೆಕ್ಟೇರ್ ಪ್ರದೇಶಕ್ಕೆ ವಿಮೆ ಮಾಡಿಸಿದ್ದರು, ಈ ಬಾರಿ 3419 ರೈತರು 3021.39 ಹೆಕ್ಟೇರ್‌ಗೆ ಮಾತ್ರ ನೋಂದಣಿ ಮಾಡಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 9218, ಉಡುಪಿ 3357 ರೈತರು ನೋಂದಣಿ ಮಾಡಿಸಿದ್ದಾರೆ.
     ಕೋಲಾರ ಜಿಲ್ಲೆಯಲ್ಲಿ ಕಳೆದ ವರ್ಷ ಮಾವು ಬೆಳೆಯುವ 6309 ರೈತರು 3681.85 ಹೆಕ್ಟೇರ್‌ಗೆ ನೋಂದಣಿ ಮಾಡಿಸಿದ್ದರು. ಈ ವರ್ಷ ಜುಲೈ 15ರ ವರೆಗೆ ಕೇವಲ 208 ರೈತರು 165.11 ಹೆಕ್ಟೇರ್‌ಗೆ ನೋಂದಣಿ ಮಾಡಿಸಿದ್ದಾರೆ.
     ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಉತ್ತಮ ಪ್ರತಿಕ್ರಿಯೆ ಇದೆ. ನಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಗಾರರು ಕಳೆದ ವರ್ಷ 14808 ರೈತರು 13,060.73 ಹೆಕ್ಟೇರ್‌ಗೆ ನೋಂದಣಿ ಮಾಡಿಸಿದ್ದರು. ಈ ವರ್ಷ ಜುಲೈ 15ರ ವರೆಗೆ 16,260 ರೈತರು 17,795.26 ಹೆಕ್ಟೇರ್‌ಗೆ ನೋಂದಣಿ ಮಾಡಿಸಿದ್ದಾರೆ.
     …
     (ಬಾಕ್ಸ್)
     ಇದುವರೆಗೆ 2672 ಕೋಟಿ ರೂ. ಪಾವತಿ
     ಈ ಯೋಜನೆಯಡಿ 2016ನೇ ಸಾಲಿನಿಂದ ಇದುವರೆಗೆ 18.70 ಲಕ್ಷ ರೈತರ ಅರ್ಜಿಗಳು ನೋಂದಣಿಗೆ ಒಳಪಟ್ಟಿದ್ದು, ಒಟ್ಟು 2672.73 ಕೋಟಿ ರೂ.ಗಳ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ.
     2022-23ನೇ ಸಾಲಿನಲ್ಲಿ 4.38 ಲಕ್ಷ ರೈತರ ಅರ್ಜಿಗಳು ನೋಂದಣಿಗೆ ಒಳಪಟ್ಟಿದ್ದು ರಿಸ್ಕ್ ಅವಧಿ ಮುಗಿದಿರುವ ಟರ್ಮ್ ಶೀಟ್‌ಗಳ ಲೆಕ್ಕಾಚಾರ ಪ್ರಗತಿಯಲ್ಲಿದೆ. ಇದುವರೆಗೆ ಒಟ್ಟು 11.15 ಕೋಟಿ ರೂ. ವಿಮಾ ಪರಿಹಾರವನ್ನು ಸಂಬಂಧಪಟ್ಟ ಬೆಳೆ ವಿಮಾ ಕಂಪನಿಗಳ ವತಿಯಿಂದ ನೀಡಲಾಗಿದೆ.
     …
     (ಕೋಟ್)
     ಪ್ರಸ್ತುತ (2023-24) ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ 6 ಜಿಲ್ಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಮುಗಿದಿದೆ. ಬ್ಯಾಂಕ್‌ಗಳ ವತಿಯಿಂದ ವಿಮೆ ಪಾವತಿಸಲಾದ ರೈತರ ಡೇಟಾ ಎಂಟ್ರಿ ಪ್ರಗತಿಯಲ್ಲಿದೆ. ಮಾವು ಬೆಳೆಯ ನೋಂದಣಿಗೆ ಜುಲೈ 31 ಅಂತಿಮ ದಿನಾಂಕವಾಗಿದ್ದು ನೋಂದಣಿ ಪ್ರಗತಿಯಲ್ಲಿದೆ. ಉಳಿದ 25 ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಎರಡು ಅಥವಾ ಮೂರು ದಿನಗಳಲ್ಲಿ ನೋಂದಣಿಗೆ ಚಾಲನೆ ನೀಡಲಾಗುವುದು.
      ಎಸ್.ಎಸ್. ಮಲ್ಲಿಕಾರ್ಜುನ್, ತೋಟಗಾರಿಕೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts