More

    ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸಿದ ಕಾಂಗ್ರೆಸ್

    ದಾವಣಗೆರೆ : ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 6 ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್, ಈಗ ನಾಲ್ಕೂ ಸ್ಥಾಯಿ ಸಮಿತಿಗಳಲ್ಲಿ ಮೇಲುಗೈ ಸಾಧಿಸುವುದರೊಂದಿಗೆ ದಾವಣಗೆರೆ ಮಹಾನಗರ ಪಾಲಿಕೆಯ ಆಡಳಿತದ ಮೇಲೂ ಹಿಡಿತ ಸಾಧಿಸಿದೆ. ಪ್ರತಿ ಸ್ಥಾಯಿ ಸಮಿತಿಯ ಏಳು ಸದಸ್ಯರ ಪೈಕಿ ತಲಾ ನಾಲ್ಕನ್ನು ಕಾಂಗ್ರೆಸ್ ಹಾಗೂ ಬೆಂಬಲಿತರು ಪಡೆದಿದ್ದಾರೆ. ಬಿಜೆಪಿ ಮೂರು ಸ್ಥಾನಗಳನ್ನು ಗಳಿಸಿದೆ.
     ಪಕ್ಷೇತರರಾಗಿ ಗೆದ್ದು ಬಿಜೆಪಿಯನ್ನು ಬೆಂಬಲಿಸಿ ಮೇಯರ್ ಆಗಿದ್ದ ಜಯಮ್ಮ ಗೋಪಿನಾಯ್ಕ ಹಾಗೂ ಉಪ ಮೇಯರ್ ಆಗಿದ್ದ ಸೌಮ್ಯಾ ನರೇಂದ್ರ ಕುಮಾರ್ ಕೈ ಪಾಳಯಕ್ಕೆ ಜಿಗಿದಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
     ಶುಕ್ರವಾರ ಪಾಲಿಕೆಯ 4 ಸ್ಥಾಯಿ ಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡುವ ಸಭೆ ಕರೆಯಲಾಗಿತ್ತು. ಜೆಡಿಎಸ್‌ನ ಬಿ. ನೂರ್ ಜಹಾನ್, ಕಾಂಗ್ರೆಸ್‌ಗೆ ಬೆಂಬಲ ನೀಡುವುದರೊಂದಿಗೆ ಕಾಂಗ್ರೆಸ್‌ನ ಬಲ 23 ಆಯಿತು. ಬಿಜೆಪಿಯ ಸದಸ್ಯರ ಸಂಖ್ಯೆ 22ಕ್ಕೆ ಸೀಮಿತವಾಯಿತು.
     ಸಂಸದ ಜಿ.ಎಂ. ಸಿದ್ದೇಶ್ವರ ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಬಂದಿರಲಿಲ್ಲ. ಬಿಜೆಪಿಯ 5 ಜನ ವಿಧಾನ ಪರಿಷತ್ ಸದಸ್ಯರೂ ಗೈರು ಹಾಜರಾಗಿದ್ದರು. ಕಾಂಗ್ರೆಸ್ ಪಾಳಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಂಎಲ್ಸಿಗಳಾದ ಅಬ್ದುಲ್ ಜಬ್ಬಾರ್ ಮತ್ತು ಹರೀಶ್ ಕುಮಾರ್ ಹಾಜರಿದ್ದುದರಿಂದ ಕೈ ಪಾಳಯದ ಬಲ 27 ಆಯಿತು.
     ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತೆರಿಗೆ, ಆರೋಗ್ಯ ಹಾಗೂ ಯೋಜನಾ ಸಮಿತಿಗಳಿಗೆ ತಲಾ ಎಂಟು ಸದಸ್ಯರು ಹಾಗೂ ಲೆಕ್ಕಪತ್ರ ಸಮಿತಿಗೆ 10 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಂತರ ಹೆಚ್ಚುವರಿಯಾಗಿ ಅರ್ಜಿ ಸಲ್ಲಿಸಿದ್ದ ಸದಸ್ಯರು ನಾಮಪತ್ರ ವಾಪಸ್ ಪಡೆದರು. ಅಂತಿಮವಾಗಿ ಎಲ್ಲ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದ್ಯರು ಅವಿರೋಧವಾಗಿ ಆಯ್ಕೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts