More

    ಕನ್ನಡ ಸಾಹಿತ್ಯ ರಚನೆಗೆ ಶಾಸನಗಳು ಪ್ರೇರಣೆ

    ದಾವಣಗೆರೆ: ಶಾಸನಗಳು ಕನ್ನಡ ಸಾಹಿತ್ಯ ರಚನೆಗೆ ಪ್ರೇರಣೆ ನೀಡುತ್ತಾ ಬಂದಿವೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಜಯರಾಮಯ್ಯ ಹೇಳಿದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 65ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಅಂತರ್ಜಾಲ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಶುಕ್ರವಾರ, ‘ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯಾದ ಶಾಸನಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.

    ಕನ್ನಡ ಶಾಸನಗಳನ್ನು ಡಾ.ಚಿದಾನಂದಮೂರ್ತಿ ‘ಕನ್ನಡ ಸಾಹಿತ್ಯದ ತಲ ಕಾವೇರಿ’ ಎಂದು ಕರೆದಿದ್ದಾರೆ. ಕನ್ನಡ ಸಾಹಿತ್ಯ ಉಗಮವಾದದ್ದು ಶಾಸನಗಳಿಂದ ಎಂಬುದು ಅವರ ವಾದವೆಂದು ತಿಳಿಸಿದರು.

    ಕವಿ ರಾಜ ಮಾರ್ಗ ಕೃತಿ ಸಿಗುವವರೆಗೂ ಕನ್ನಡ ಸಾಹಿತ್ಯ ರಚನೆಗೆ ಶಾಸನಗಳೇ ಪೂರಕ ದಾಖಲೆಗಳಾಗಿವೆ. ಕವಿ ರಾಜ ಮಾರ್ಗ ಲಕ್ಷಣ ಗ್ರಂಥವಾದರೆ ವಡ್ಡಾರಾಧನೆ ಗದ್ಯಕೃತಿ. ಆದರೆ ಪಂಪನ ಆದಿಪುರಾಣವೇ ಕನ್ನಡದ ಮೊದಲ ಕಾವ್ಯ ಎಂದು ಹೇಳಿದರು.

    ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಪೂ. ಐನೂರರ ಚಿತ್ರದುರ್ಗದ ತಮಟಕಲ್ಲು ಶಾಸನ, ಇದು ಕನ್ನಡ ಸಾಹಿತ್ಯದ ಮೊದಲ ಪದ್ಯ. ಇದು ಕನಕಾರ್ಜುನಿವೃತ್ತ ದಲ್ಲಿರುವ ಪದವಾಗಿದ್ದು, ಗುಣಮಧುರ ಎಂಬ ವ್ಯಕ್ತಿಯನ್ನು ಹೊಗಳಿರುವ ಶಾಸನವಾಗಿದೆ ಎಂದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಕನ್ನಡ ನಾಡಲ್ಲಿ ಅನೇಕ ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ ಶಾತವಾಹನರು, ಕಂಚಿಯ ಪಲ್ಲವರು, ತಲಕಾಡಿನ ಸ್ಕಂದರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು, ಬಹಮನಿ ಸುಲ್ತಾನರು ಹೀಗೆ ಅನೇಕರು ಆಡಳಿತ ನಡೆಸಿದ ಇತಿಹಾಸವಿದೆ.

    ಅವರ ಕಾಲದಲ್ಲಿ ಅನೇಕ ಶಾಸನಗಳು ರಚನೆಯಾಗಿದ್ದು, ಅವು ಆ ಕಾಲದ ಇತಿಹಾಸವನ್ನು ತಿಳಿಯುವಲ್ಲಿ ನಮಗೆ ಸಹಕಾರಿಯಾಗಿವೆ.
    ದಾವಣಗೆರೆ ಜಿಲ್ಲೆಯವರೇ ಆದ ಸಂಶೋಧಕ ಡಾ. ಚಿದಾನಂದ ಮೂರ್ತಿ ಸಂಶೋಧಿಸಿ ತಿಳಿಸಿದ ಶಾಸನ 7 ನೇ ಶತಮಾನದ್ದಾಗಿದ್ದು, ಬಾದಾಮಿಯ ಸಮೀಪದ ಸುತ್ತುಕೋಟೆ ಎಂಬ ಗ್ರಾಮದಲ್ಲಿ ದೊರೆತಿರುವ ಕಪ್ಪೆ ಅರಭಟ್ಟ ಶಾಸನ, ಇನ್ನೂ ಅನೇಕ ಶಾಸನಗಳು, ನಮ್ಮ ಜಿಲ್ಲೆಯವರೇ ಆದ ಪ್ರೊ. ರಾಜಶೇಖರಪ್ಪ, ಸಂತೇಬೆನ್ನೂರಿನ ನಾಡಿಗ್, ದಾವಣಗೆರೆಯ ಡಾ.ಬುರುಡೆಕಟ್ಟೆ ಮಂಜಪ್ಪ ಮುಂತಾದವರು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ ಎಂದರು.

    ಸೀತಮ್ಮ ಸರ್ಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕಿ ಅನ್ನಪೂರ್ಣ ಪಾಟೀಲ್ ಸ್ವಾಗತಿಸಿದರು. ರುದ್ರಾಕ್ಷಿ ಬಾಯಿ ಪುಟ್ಟ ನಾಯಕ್ ಮತ್ತು ಸಂಗಡಿಗರು ಕನ್ನಡ ಹಾಡುಗಳನ್ನು ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts