More

  ದಾವಣಗೆರೆಯಲ್ಲಿ ನಡೆದಿತ್ತು ‘ತುಂಬಿದ ಕೊಡ’ ಚಿತ್ರೀಕರಣ

  ದಾವಣಗೆರೆ : ಶುಕ್ರವಾರ ನಿಧನರಾದ ಹಿರಿಯ ನಟಿ ಲೀಲಾವತಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ‘ತುಂಬಿದ ಕೊಡ’ ಚಲನಚಿತ್ರದ ಚಿತ್ರೀಕರಣ ದಾವಣಗೆರೆಯಲ್ಲಿ ನಡೆದಿತ್ತು.
   ಇಲ್ಲಿನ ನಗರಸಭೆ, ರಾಜನಹಳ್ಳಿ ಹನುಮಂತಪ್ಪ ಛತ್ರ, ಪಿಜೆ ಬಡಾವಣೆಯ ಖಮಿತ್ಕರ್ ಈಶ್ವರಪ್ಪ ರಾಮ ದೇವಸ್ಥಾನ, ಹಳೇ ದಾವಣಗೆರೆಯ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿ ಅವರು ನಡೆದು ಬರುವುದು, ಚಾಮರಾಜ ವೃತ್ತದಲ್ಲಿ ಮತ್ತೊಬ್ಬ ಹಿರಿಯ ನಟಿ ಜಯಂತಿ ಚಾಲನೆ ಮಾಡುತ್ತಿದ್ದ ಕಾರಿಗೆ ಲೀಲಾವತಿ ಅವರು ಎದುರಾಗಿ ಬೀಳುವ ದೃಶ್ಯ ಚಿತ್ರೀಕರಣವಾಗಿತ್ತು.
   ಆಗ ನಡೆದಿದ್ದ ಶೂಟಿಂಗ್‌ಗೆ ಸಾಕ್ಷಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಆ ದಿನಗಳನ್ನು ನೆನಪು ಮಾಡಿಕೊಂಡರು. ಆಗ ಚಿತ್ರೀಕರಣವನ್ನು ನೋಡುವುದೇ ನಮಗೊಂದು ಸಂಭ್ರಮವಾಗಿತ್ತು. ಈ ಚಿತ್ರದಲ್ಲಿ ಜನಪ್ರಿಯವಾದ ‘ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಇನ್ನಿಲ್ಲ….’ ಎಂಬ ಹಾಡನ್ನು ಪಿ. ಕಾಳಿಂಗರಾಯರು ಹಾಡಿದ್ದರು. ಲೀಲಾವತಿ ಜತೆಗೆ ರಾಜಕುಮಾರ್, ಜಯಂತಿ ಹಾಗೂ ನಮ್ಮ ನಗರದ ಚಿಂದೋಡಿ ಲೀಲಾ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು ಎಂದು ಅವರು ಮೆಲುಕು ಹಾಕಿದರು.
   ‘ತುಂಬಿದ ಕೊಡ ಚಿತ್ರದ ಚಿತ್ರೀಕರಣವನ್ನು ರಾಜನಹಳ್ಳಿ ಅವರ ಗೆಸ್ಟ್ ಹೌಸ್‌ನಲ್ಲಿ ಮಾಡಿದ್ದನ್ನು ನಾನು ನೋಡಿದ್ದೆ. ಕಿತ್ತೂರು ಚನ್ನಮ್ಮ ಸಿನಿಮಾದಲ್ಲಿ ದಾವಣಗೆರೆಯ ಕಲಾವಿದರಾದ ಚಿಂದೋಡಿ ವೀರಪ್ಪ ಹಾಗೂ ಚಿಂದೋಡಿ ಲೀಲಾ ಅವರು ಲೀಲಾವತಿ ಜತೆಗೆ ಅಭಿನಯಿಸಿದ್ದರು’ ಎಂದು ಲೇಖಕ ಬಾ.ಮ. ಬಸವರಾಜ ಹೇಳಿದರು.
   ‘ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾದಾಗ 1962 ರಲ್ಲಿ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಲು ಕನ್ನಡ ಚಿತ್ರರಂಗದ ಮೇರು ಕಲಾವಿದರೆಲ್ಲ ದಾವಣಗೆರೆಗೆ ಬಂದಿದ್ದರು. ಡಾ. ರಾಜಕುಮಾರ್, ಲೀಲಾವತಿ ಸೇರಿ ಹಲವು ಕಲಾವಿದರು ಲಾರಿಯಲ್ಲಿ ರೋಡ್ ಶೋ ಮಾಡಿದ್ದರು. ನಾನು ಆಗ 11 ವರ್ಷದ ಬಾಲಕನಿದ್ದೆ’ ಎಂದು ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts