More

    ಬಾಲಭವನದಲ್ಲಿ ಚಿಣ್ಣರ ಚಿಲಿಪಿಲಿ

    ದಾವಣಗೆರೆ : ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಬಾಲ ಭವನದಲ್ಲಿ ಶುಕ್ರವಾರ ಚಿಣ್ಣರದೇ ಚಿಲಿಪಿಲಿ. ಪುಟ್ಟ ಪುಟ್ಟ ಮಕ್ಕಳು ಕುಣಿದರು, ಹಾಡಿದರು, ಸ್ನೇಹಿತರೊಂದಿಗೆ ಬೆರೆತು ಸಂಭ್ರಮಿಸಿದರು.
     ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
     ಬಾಲಭವನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳಿಂದ ಬಂದಿದ್ದ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಬಣ್ಣ ಬಣ್ಣದ ಉಡುಗೆ ತೊಟ್ಟಿದ್ದ ಮಕ್ಕಳು ಗಮನ ಸೆಳೆದರು.
     ಅಂಧ ಮಕ್ಕಳು ಇತರರಿಗಿಂತ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ನೃತ್ಯ ಪ್ರದರ್ಶನ ನೀಡಿದರು. ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಇತರ ಮಕ್ಕಳಿಗೆ ಸ್ಫೂರ್ತಿಯಾದರು.
     ಅಂಗನವಾಡಿ ಮಕ್ಕಳು ‘ಅಆಇಈ ಕನ್ನಡದಾ ಅಕ್ಷರಮಾಲೆ’ ಹಾಡಿಗೆ ಸುಂದರವಾಗಿ ನೃತ್ಯ ಮಾಡಿದರು. ಕೈಯಲ್ಲಿ ಸ್ಲೇಟ್ ಹಿಡಿದು ಬಂದಿದ್ದರು. ಮತ್ತೆ ಕೆಲ ಮಕ್ಕಳು ‘ಬಾಲ್ಯವಿವಾಹ ಮಾಡಬೇಡಿ’, ‘ದುಡಿಮೆ ಬೇಡ, ಮಕ್ಕಳಿಗೆ ಶಿಕ್ಷಣ ಬೇಕು’ ಎನ್ನುವ ಬರಹವುಳ್ಳ ಪ್ಲಕಾರ್ಡ್‌ಗಳನ್ನು ಹಿಡಿದು ಬಂದಿದ್ದರು. ಸಾಂಸ್ಕೃತಿಕ ಪ್ರದರ್ಶನದ ಜತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು ಎನ್ನುವ ಸಂದೇಶವನ್ನೂ ರವಾನಿಸಿದರು.
     ‘ಹಕ್ಕಿ ಚಿಲಿಪಿಲಿ, ಗಿಲಕ ಗಿಲಿಗಿಲಿ’ ಹಾಡಿನ ಮೂಲಕ ಬನಶಂಕರಿ ಶಾಲೆಯ ಮಕ್ಕಳು ಮುದ್ದಾದ ಪ್ರದರ್ಶನ ನೀಡಿದರು. ಹಿನ್ನೆಲೆಯಲ್ಲಿ ಪಕ್ಷಿಗಳ ಕಲರವ ಕೇಳಿಬಂದಿತು.
     ಬಿಜೆಎಂ ಶಾಲೆಯ ಮಕ್ಕಳಂತೂ ಜಾನಪದ ಮೋಡಿ ಮಾಡಿದರು. ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ ಚಿಣ್ಣರು ರಾಗಿ ಬೀಸುವ ಪದಕ್ಕೆ ಹೆಜ್ಜೆ ಹಾಕಿದರು. ಹಾಡಿನಲ್ಲಿ ಬೀಸುವ ಕಲ್ಲು, ಬುಟ್ಟಿ, ಆರತಿ ತಟ್ಟೆಗಳನ್ನು ಬಳಸಿಕೊಂಡಿದ್ದು ಗಮನ ಸೆಳೆಯಿತು.
     ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ಮಾತನಾಡಿ, ಬಾಲಭವನ ನಿರ್ಮಾಣವಾಗಿ 5 ವರ್ಷಗಳಾದರೂ ಇಲ್ಲಿ ಮಕ್ಕಳ ದಿನವನ್ನು ಆಚರಿಸಿರಲಿಲ್ಲ, ಈ ಬಾರಿ ಆಯೋಜನೆ ಮಾಡಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
     ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಜಿ. ಕೊಟ್ರೇಶ್ ಮಾತನಾಡಿ, ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಬೆಳಕಿಗೆ ತರಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
     ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಶಿಕ್ಷಕ ಗುರುಸಿದ್ಧಸ್ವಾಮಿ, ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts