More

    ಮಕ್ಕಳ ಚಲನವಲನದ ಮೇಲೆ ನಿಗಾ ಇರಲಿ

    ದಾವಣಗೆರೆ : ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಇನ್ ಕ್ಯಾಮರಾ ವಿಚಾರಣೆ ನಡೆಸುವ ಕಾರಣ ಯಾವುದೇ ಹಿಂಜರಿಕೆ ಹಾಗೂ ಭಯ ಇಲ್ಲದೆ ದೂರು ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್. ಶ್ರೀಪಾದ ತಿಳಿಸಿದರು.
     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೋಕ್ಸೋ ಅರಿವು, ಬಾಲ್ಯವಿವಾಹ ತಡೆ, ಬಾಲಕಾರ್ಮಿಕ, ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
     18 ವರ್ಷದೊಳಗಿನ ಬಾಲಕ, ಬಾಲಕಿಯರ ಮೇಲಿನ ಎಲ್ಲ ಅತ್ಯಾಚಾರ ಪ್ರಕರಣಗಳು ಇದರ ವ್ಯಾಪ್ತಿಗೆ ಬರುತ್ತವೆ. ಜಿಲ್ಲೆಯ ಎಲ್ಲ ಶಾಲೆ ಮತ್ತು ಕಾಲೇಜು ಶಿಕ್ಷಕರು ಹಾಗೂ ಪ್ರಾಧ್ಯಾಪಕರು ಮಕ್ಕಳ ಮೇಲೆ ಸದಾ ಕಾಳಜಿ ವಹಿಸಿ ಅವರ ಚಲನವಲನ ಗಮನಿಸಬೇಕು ಎಂದು ಸಲಹೆ ನೀಡಿದರು.
     ಅತ್ಯಾಚಾರ ಕೇವಲ ಅಪರಿಚಿತರಿಂದಲೇ ಆಗುತ್ತವೆ ಎನ್ನುವುದು ಸಹಜ. ಅದೆಷ್ಟೋ ಪ್ರಕರಣಗಳು ಶಿಕ್ಷಕರು, ನೆರೆಹೊರೆಯವರು ಮತ್ತು ಸಂಬಂಧಿಕರಿಂದಲೇ ನಡೆಯುತ್ತವೆ. ಯಾವುದೇ ಮುಚ್ಚುಮರೆ ಇಲ್ಲದೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ದೂರು ನೀಡಿದಾಗ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿ, ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಹಾಯಕವಾಗಲಿದೆ. ಇಂತಹ ತಪ್ಪುಗಳು ಕಂಡು ಬಂದ ತಕ್ಷಣ ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
     ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಬಂದು 76 ವರ್ಷ ಕಳೆದಿವೆ. ಸಮಾಜದ ಅಭಿವೃದ್ಧಿಗೆ ಹಲವು ಕಾನೂನು ರಚನೆಯಾಗಿದ್ದು, ಎಲ್ಲ ಕಾನೂನುಗಳ ತಾಯಿ ನಮ್ಮ ಸಂವಿಧಾನ. ಆದರೆ, ಇಂದಿಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ. ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ಸಾರ್ವಜನಿಕರಲ್ಲಿ ಕಾನೂನು ಬಗ್ಗೆ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಹೇಳಿದರು.
     ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್ ಆಗಮಿಸಿದ್ದರು. ಡಿಡಿಪಿಐ ಜಿ. ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ, ಬಿಇಓ ಡಾ.ಪುಷ್ಪಲತಾ, ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಎಂ. ಚೌಡಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts