More

    ಸಿ.ಆರ್.ಸಿ ಕೇಂದ್ರದ ಕಟ್ಟಡ ಡಿಸೆಂಬರ್‌ಗೆ ಪೂರ್ಣ

    ದಾವಣಗೆರೆ : ಸಮೀಪದ ವಡ್ಡಿನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಅಂಗವಿಕಲರ ಸಂಯುಕ್ತ ಪ್ರಾದೇಶಿಕ ಕೇಂದ್ರದ ಪ್ರಧಾನ ಕಟ್ಟಡ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
     ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿ, ಈ ಕೇಂದ್ರವು ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ವಿಶೇಷ ಕೊಡುಗೆಯಾಗಿದೆ. ದಾವಣಗೆರೆ ಜಿಲ್ಲೆಗೆ ಕಳಶವಿಟ್ಟಂತಿದೆ ಎಂದು ತಿಳಿಸಿದರು.
     ಕಟ್ಟಡಕ್ಕೆ ಈಗಾಗಲೇ 25 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ 30 ಕೋಟಿ ರೂ. ಅನುದಾನದಲ್ಲಿ ತರಬೇತಿ ಕೇಂದ್ರ, ಹಾಸ್ಟೆಲ್, ಅತಿಥಿಗೃಹ ನಿರ್ಮಾಣಕ್ಕೆ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಕ್ರೀಡಾ ಸಮುಚ್ಚಯ, ಈಜುಕೊಳ, ಸಲಕರಣೆಗಳ ಉತ್ಪಾದನಾ ಘಟಕ ನಿರ್ಮಿಸುವ ಯೋಜನೆಯಿದೆ ಎಂದು ಮಾಹಿತಿ ನೀಡಿದರು.
     ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿ ಬರುವ ಈ ಕೇಂದ್ರವು 2017 ರಿಂದ ದಾವಣಗೆರೆಯ ದೇವರಾಜ ಅರಸು ಬಡಾವಣೆಯಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದೆ.
     ಈ ಕೇಂದ್ರಕ್ಕೆ ವಡ್ಡಿನಹಳ್ಳಿ ಬಳಿ 9 ಎಕರೆ, ಕೊಗ್ಗನೂರು ಬಳಿ 7.23 ಎಕರೆ ಜಮೀನು ಮಂಜೂರಾಗಿದ್ದು ಮುಖ್ಯ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಒಟ್ಟು 55 ಕೋಟಿ ರೂ. ವೆಚ್ಚದಲ್ಲಿ ಕೇಂದ್ರವು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
     ಇಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯರಿಗೆ ಚಿಕಿತ್ಸೆ, ತರಬೇತಿ ಮತ್ತು ಪುನರ್ವಸತಿ ಕಲ್ಪಿಸಲಾಗುತ್ತದೆ. ಇದುವರೆಗೆ 38,557 ಜನರಿಗೆ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 5 ಸಾವಿರಕ್ಕೂ ಹೆಚ್ಚು ಜನರು ವಿಶೇಷ ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ ಎಂದರು.
     ಆರ್ಥಿಕವಾಗಿ ಹಿಂದುಳಿದ 3,212 ಜನರಿಗೆ ಗಾಲಿ ಕುರ್ಚಿ, ಶ್ರವಣ ಯಂತ್ರಗಳನ್ನು ವಿತರಿಸಲಾಗಿದೆ. 2019 ರಿಂದ ಈ ಕೇಂದ್ರದಲ್ಲಿ 2 ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿದೆ. ಪವರ್‌ಗ್ರಿಡ್ ಕಾರ್ಪೊರೇಷನ್ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ಒಂದು ಮಿನಿ ಬಸ್ ಅನ್ನು ಈ ಕೇಂದ್ರಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
     ಮುಖ್ಯ ಇಂಜಿನಿಯರ್ ಕೆ.ಕೆ. ಅಗರ್‌ವಾಲ್ ಮಾತನಾಡಿ, ಸಿ.ಆರ್.ಸಿ ಕೇಂದ್ರವು 50 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ. ಅಂಗವಿಕಲರ ಚಿಕಿತ್ಸೆ, ತರಬೇತಿ, ಪುನರ್ವಸತಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಇಲ್ಲಿರಲಿವೆ ಎಂದು ಹೇಳಿದರು.
     ಕೇಂದ್ರದ ನಿರ್ದೇಶಕ ಮಾರುತಿ ಕೃಷ್ಣ ಮಾತನಾಡಿದರು. ಉಪ ಮೇಯರ್ ಯಶೋದಾ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಕೆ.ಎಂ. ವೀರೇಶ್, ಸೋಗಿ ಶಾಂತಕುಮಾರ್, ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಂ. ಸತೀಶ್, ರಾಜನಹಳ್ಳಿ ಶಿವಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ, ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸಲು ಇದ್ದರು.
     ಇದೇ ವೇಳೆ ಕೇಂದ್ರದ ಕಾಮಗಾರಿಯಲ್ಲಿ ತೊಡಗಿರುವ 200 ಕಾರ್ಮಿಕರ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.
     …
     * ಇ.ಎಸ್.ಐ. ಆಸ್ಪತ್ರೆಗೆ ಭೇಟಿ
     ನಗರದ ಇ.ಎಸ್.ಐ. ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಸಿದ್ದೇಶ್ವರ, ಅಲ್ಲಿ 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಿದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.
     ಆಸ್ಪತ್ರೆಯ ಹಳೆಯ ಕಟ್ಟಡವನ್ನೇ 14 ಕೋಟಿ ರೂ. ವೆಚ್ಚದಲ್ಲಿ ಬಲವರ್ಧನೆಗೊಳಿಸಲಾಗುತ್ತಿದ್ದು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts