More

    ದಾವಣಗೆರೆ ಜಿಲ್ಲೆಯಲ್ಲಿ ಕರೊನಾ ಸೋಂಕು ಏರುಗತಿ

    ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 495 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಸಕ್ರಿಯ ಕೇಸ್‌ಗಳ ಸಂಖ್ಯೆ 1805ಕ್ಕೆ ಏರಿಕೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 205, ಹೊನ್ನಾಳಿ 114, ಹರಿಹರ 67, ಚನ್ನಗಿರಿ 58, ಜಗಳೂರು 44, ಹೊರ ಜಿಲ್ಲೆಗಳ 7 ಪ್ರಕರಣಗಳು ದೃಢಪಟ್ಟಿವೆ.

    ಶಾಲಾ ಕಾಲೇಜುಗಳ 164 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಪೈಕಿ ಹೊನ್ನಾಳಿ ತಾಲೂಕಿನಲ್ಲಿ 53, ದಾವಣಗೆರೆ 38, ಹರಿಹರ 29, ಚನ್ನಗಿರಿ 27, ಜಗಳೂರು ತಾಲೂಕಿನಲ್ಲಿ 17 ಪ್ರಕರಣಗಳು ಕಂಡುಬಂದಿವೆ. 5 ವರ್ಷದೊಳಗಿನ 3 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಶಾಲಾ ಕಾಲೇಜುಗಳ 668 ವಿದ್ಯಾರ್ಥಿಗಳಿಗೆ, 5 ವರ್ಷದೊಳಗಿನ 15 ಮಕ್ಕಳಿಗೆ ಸೋಂಕು ತಗುಲಿದೆ.ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ವಸತಿ ಶಾಲೆಗಳ ಮಕ್ಕಳಲ್ಲಿ ಕರೊನಾ ಕಾಣಿಸಿಕೊಂಡಿದೆ. ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ 7 ಮಂದಿಗೆ ಕೋವಿಡ್ ದೃಢಪಟ್ಟಿದೆ.

    ಸಂತೆ ವ್ಯಾಪಾರ ಜೋರು: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಸಂತೆಯಲ್ಲಿ ಜನಸಂದಣಿ ಇರಲಿಲ್ಲ. ಕರ್ಫ್ಯೂ ರದ್ದಾದ ಕಾರಣ ಭಾನುವಾರ ಮತ್ತೆ ವ್ಯಾಪಾರ, ವಹಿವಾಟು ಕಂಡುಬಂದಿತು. ನಗರದ ಗಡಿಯಾರ ಕಂಬ, ವಿಜಯಲಕ್ಷ್ಮೀ ರಸ್ತೆ, ಕೆ.ಆರ್. ಮಾರುಕಟ್ಟೆ, ಚಾಮರಾಜ ಪೇಟೆ ಇನ್ನಿತರ ಕಡೆಗಳಲ್ಲಿ ತರಕಾರಿ ಮಾರಾಟ ಜೋರಾಗಿತ್ತು.

    893 ಮಂದಿಗೆ ಬೂಸ್ಟರ್ ಡೋಸ್ ನೀಡಿಕೆ: ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ಎರಡೂ ತಾಲೂಕಿನ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿ 893 ಮಂದಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ ತಿಳಿಸಿದರು. ಪುರಸಭಾ ಆವರಣದಲ್ಲಿ ಭಾನುವಾರ ಪೌರಕಾಮಿಕರು, ತಾಲೂಕು ಆಡಳಿತ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಿಕೆಗೆ ಚಾಲನೆ ನೀಡಿ ಮಾತನಾಡಿದರು.

    ಕೆಲವು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಕರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ. ಸೋಂಕು ದೃಢವರನ್ನು ಶಾಲೆಯಲ್ಲಿ ಐಸೋಲೇಷನ್ ಮಾಡಿಸಲಾಗುತ್ತಿದೆ. ಕೆಲವು ಪಾಲಕರು ಮಕ್ಕಳನ್ನು ಕಳುಹಿಸಿಕೊಡುವಂತೆ ಕೇಳುತ್ತಿದ್ದು, ಅಂಥವರಿಗೆ ಸೂಕ್ತ ಸಲಹೆ, ಔಷಧ ನೀಡಿ ಕಳುಹಿಸಲಾಗುತ್ತಿದೆ. ಸ್ಥಳೀಯ ಆಸ್ಪತ್ರೆಗೂ ಮಾಹಿತಿ ನೀಡಲಾಗುತ್ತಿದೆ ಎಂದರು. ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ, ಎಇಇ ದೇವರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಶಿವಪದ್ಮಾ, ನಾಗರತ್ನ್ನಾ ಇತರರಿದ್ದರು.

    ಸೋಂಕಿತರನ್ನು ಆಸ್ಪತ್ರೆಯಲ್ಲಿರಿಸಿ: ಕರೊನಾ ಸೋಂಕಿತರ ಮನೆ, ಪ್ರದೇಶವನ್ನು ಸೀಲ್‌ಡೌನ್ ಮಾಡಿ, ಪ್ರಕರಣಗಳ ಸಂಖ್ಯೆ ಏರಿಕೆಯಾಗದಂತೆ ಕಡಿವಾಣ ಹಾಕಬೇಕು. ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗದಂತೆ ತಡೆಯಲು ಸೋಂಕಿತರನ್ನು ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಬೇಕೆಂದು ಸಾರ್ವಜನಿಕರು ತಾಲೂಕು ಆಡಳಿತವನ್ನು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts