More

    ಹಿತ ಮಿತವಾದ ಮಾತು ವ್ಯಕ್ತಿತ್ವಕ್ಕೆ ಭೂಷಣ

    ದಾವಣಗೆರೆ : ನಾವಾಡುವ ಮಾತು ಸಂಸ್ಕಾರದ ಪ್ರತೀಕ. ಹಿತ ಮಿತವಾದ ಮಾತು ವ್ಯಕ್ತಿತ್ವಕ್ಕೆ ಭೂಷಣ ಎಂದು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.
     ಚನ್ನಗಿರಿ ತಾಲೂಕು ಸಂತೇಬೆನ್ನೂರಿನ ಎಸ್‌ಎಸ್‌ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಮಾಸದ ಮಾತು ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಮಾತುಗಳು ಉದ್ವೇಗ ರಹಿತ, ಸತ್ಯ, ಪ್ರೀತಿ, ಹಿತ ಹಾಗೂ ಸರಳವಾಗಿರಬೇಕು. ಮಾತು ಅಮೃತವೂ ಹೌದು, ವಿಷವೂ ಹೌದು. ನಾಲಿಗೆ ಚೆನ್ನಾಗಿದ್ದರೆ ನಾಡೆಲ್ಲ ಚೆನ್ನಾಗಿರುತ್ತದೆ. ದೋಷ ರಹಿತ ಮಾತುಗಳು ಆಕರ್ಷಣೆ ನೀಡುತ್ತವೆ ಎಂದು ತಿಳಿಸಿದರು.
     ನುಡಿದರೆ ಮುತ್ತಿನ ಹಾರದಂತಿರಬೇಕು. ನೊಂದವರಿಗೆ, ನಿರಾಶ್ರಿತರಿಗೆ ಭರವಸೆಯ ಆಶಾಕಿರಣ ಮೂಡಿಸಬೇಕು. ಭಾವನಾತ್ಮಕ ಮಾತುಗಳಿಂದ ಆತ್ಮೀಯತೆ ವೃದ್ಧಿಸುತ್ತದೆ. ಆಡಂಬರ ಇರಬಾರದು ಎಂದು ಹೇಳಿದರು.
     ಸ್ವ ಅಧ್ಯಯನದಿಂದ ನಾವಾಡುವ ಮಾತುಗಳಲ್ಲಿ ಪ್ರಬುದ್ಧತೆ ಇರುತ್ತದೆ. ಏನು, ಯಾವಾಗ, ಎಲ್ಲಿ ಮಾತಾಡುತ್ತಿದ್ದೇವೆ ಎಂಬ ಜಾಗೃತಾವಸ್ಥೆ ಇರಬೇಕು. ಹೇಗೆ, ಎಷ್ಟು ಮಾತನಾಡಬೇಕು ಎನ್ನುವ ಸಂಯಮ ತೋರಬೇಕು. ಆಗ ಮಾತು ಮಲ್ಲಿಗೆಯಂತಾಗುತ್ತದೆ ಎಂದರು.
     ಬಿ.ವಿ. ತಿಮ್ಮನಗೌಡರು ಭೀಮನೆರೆ ಅವರ ಅನುಭವದ ಅನುಭಾವಾಮೃತಗಳು ಎಂಬ ಕೃತಿಯನ್ನು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ. ಸಿದ್ಧಲಿಂಗಪ್ಪ ಲೋಕಾರ್ಪಣೆ ಮಾಡಿದರು. ಹಿರಿಯ ಛಾಯಾಗ್ರಾಹಕ ಸುಬ್ರಹ್ಮಣ್ಯ ಹೊಳ್ಳ, ಸಾಹಿತಿ ಫೈಜ್ನಟ್ರಾಜ್ ಇದ್ದರು.
     ನಾಗೇಂದ್ರಪ್ಪ, ಶರತ್, ಸಿದ್ದಿಕ್, ದೇವು ಬನ್ನಿಕೋಡು, ಹಾಲೇಶ್, ದಶರಥ್, ವಿಶ್ವನಾಥ್, ಮಮತಾ ವೀರಯ್ಯ, ಸುನೀತಾ, ಪ್ರಭು, ಇಂದ್ರಜಿತ್, ಗಿರೀಶ್, ಸುಮತಿ, ಸಾಹಿತಿ ಸುನೀತಾ ಇದ್ದರು. ಮಾರುತಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts