More

    ದಾವಣಗೆರೆಯಲ್ಲಿ ರಕ್ತದಾನ ಮಾಡಿ ಕಬ್ಬು ಬೆಳೆಗಾರರ ಹೋರಾಟ; ಹೆದ್ದಾರಿ ತಡೆ

    ದಾವಣಗೆರೆ: ಕಬ್ಬಿಗೆ ಘೋಷಿಸಿದ ಎಫ್‌ಆರ್‌ಪಿ ಮರು ಪರಿಶೀಲನೆ, ಪರಿಷ್ಕರಣೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ರೈತರು ಹೆದ್ದಾರಿ ತಡೆ ಜತೆಗೆ ರಕ್ತದಾನ ಮಾಡುವ ಮೂಲಕ ವಿನೂತನ ರೀತಿ ಹೋರಾಟ ನಡೆಸಿದರು.

    ರಾಜ್ಯ ಕಬ್ಬು ಬೆಳೆಗಾರರ ಸಂಘದಡಿ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಶುಕ್ರವಾರ ದಾವಣಗೆರೆ ಜಿಪಂ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಇಳಿದ ರೈತರು, ವಾಹನ ತಡೆ ನಡೆಸಿದರು.

    ಈ ವೇಳೆ ಕಾರಿಗನೂರಿನ ಪೂಜಾರ್ ಕಲ್ಲೇಶಪ್ಪ, ಪ್ರಸನ್ನ ಎಂಬುವರು ರಕ್ತದಾನ ಮಾಡುವ ಮೂಲಕ ಹೋರಾಟಕ್ಕಿಳಿದರು. ಇನ್ನು ಮೂವರು ರಕ್ತದಾನಕ್ಕೆ ಮುಂದಾದರಾದರೂ ಆಸ್ಪದವಾಗ ಲಿಲ್ಲ. ಹಲವರು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದ ಲಾರಿ, ಬಸ್ ಇತರೆ ವಾಹನದಲ್ಲಿದ್ದವರಿಗೆ, ರಕ್ಷಣೆಗೆ ಧಾವಿಸಿದ್ದ ಪೊಲೀಸರಿಗೆ ಶೇಂಗಾ-ಸಾವಯವ ಬೆಲ್ಲ ನೀಡಿಯೂ ಗಮನ ಸೆಳೆದರು.

    ಸಕ್ಕರೆ ಇಳುವರಿ ಪ್ರಮಾಣವನ್ನು ಪ್ರತಿ ಟನ್ ಕಬ್ಬಿಗೆ ಕನಿಷ್ಠ 95 ಕೆಜಿ ನಿಗದಿ ಮತ್ತು 3,500 ರೂ. ಎಫ್‌ಆರ್‌ಪಿ ಘೋಷಣೆಗೆ ಒತ್ತಾಯಿಸಿದರು. ಕೇಂದ್ರ ಸರ್ಕಾರ ವಿಧಿಸಿದ ಎಫ್‌ಆರ್‌ಪಿ ಅವೈಜ್ಞಾನಿಕವಾಗಿದ್ದು ಇದನ್ನು ಮರು ಪರಿಷ್ಕರಿಸಬೇಕೆಂದು ಪಟ್ಟು ಹಿಡಿದು ಹೆದ್ದಾರಿ ಬಂದ್ ಮಾಡಿದರು. ಮುಕ್ಕಾಲು ತಾಸು ಹೆದ್ದಾರಿ ಬಂದ್ ಮಾಡಲಾಗಿತ್ತು. ಪ್ರತಿಭಟನಾಕಾರರ ಬೇಡಿಕೆಯಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿದರು.

    102.5 ಕೆಜಿ ಸಕ್ಕರೆ ಇಳುವರಿ ಹೊಂದಿದ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ 3050 ರೂ. ಎಫ್‌ಆರ್‌ಪಿ ಘೋಷಿಸಿದೆ. ಈ ದರ ಅವೈಜ್ಞಾನಿಕವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದರು.

    ಈ ಹಿಂದೆ 95 ಕೆಜಿ ಇಳುವರಿಯ ಟನ್ ಕಬ್ಬಿಗೆ 2090 ರೂ. ನಿಗದಿಯಾಗಿತ್ತು. ಇಳುವರಿ ಪ್ರಮಾಣ 7 ಕೆಜಿ ಹೆಚ್ಚಿಸಿದ್ದರಿಂದ ಪರಿಷ್ಕೃತ ದರ ರೈತರಿಗೆ ಅನುಕೂಲಕರವಾಗಿಲ್ಲ. ಸರ್ಕಾರದ ಈ ನೀತಿ ಒಂದು ಕಡೆ ನೀಡಿ, ಮತ್ತೊಂದೆಡೆ ಕಸಿದಂತಾಗಿದೆ. ಕೇಂದ್ರ ಸರ್ಕಾರ ಜನರಿಗೆ ಅರ್ಥವಾಗದಂತೆ ಕೆಲವು ಕಾರ್ಯಕ್ರಮ ರೂಪಿಸುತ್ತಿದೆ ಎಂದು ದೂರಿದರು.

    ಸರ್ಕಾರ, ಕೂಡಲೇ ಟನ್ ಕಬ್ಬಿಗೆ 95 ಕೆಜಿ ಸಕ್ಕರೆ ಇಳುವರಿಯನ್ನು ಶಾಶ್ವತ ಮಾನದಂಡ ಮಾಡಬೇಕು. 2022-23ನೇ ಸಾಲಿಗೆ ಈ ಇಳುವರಿ ಆಧರಿಸಿ 3500 ರೂ. ದರ ನಿಗದಿಗೊಳಿಸಿ, ಎಫ್‌ಆರ್‌ಪಿ ಮರು ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿದರು.

    ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುತ್ತಿದೆ. ಆದರೆ, ಈಗ ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ರೈತರಿಗೆ ಶೇ.50ರಷ್ಟು ಆದಾಯ ಬರುವುದೂ ಕಷ್ಟವಾಗಲಿದೆ. ಕೂಡಲೇ ಖಾಸಗಿಗೆ ನೀಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

    ಲಕ್ಕಿ ಡಿಪ್‌ನಂತಾದ ನೆರೆ ಪರಿಹಾರ
    ನೆರೆ ಪರಿಹಾರ ಲಕ್ಕಿ ಡಿಪ್‌ನಂತಾಗಿದೆ. ಎಲ್ಲರಿಗೂ ಸಿಗುತ್ತಿಲ್ಲ. ನಿಜವಾಗಿ ನಷ್ಟಕ್ಕೀಡಾದ ರೈತರಿಗೆ ದಕ್ಕಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ನ್ಯಾಯಯುತವಾಗಿ ಪರಿಹಾರ ಮೊತ್ತ ವಿತರಣೆ ಆಗಬೇಕು. ರಂಗರಾಜನ್ ಸಮಿತಿ ವರದಿ ನೀಡಿ 8 ವರ್ಷ ಕಳೆದರೂ ಅದರ ಪ್ರಸ್ತಾವ ಈಡೇರಿಲ್ಲ. ಕಬ್ಬು ನಿಯಂತ್ರಣ ಮಂಡಳಿಯಡಿ ಬೆಳೆಗಾರರಿಗೆ ಕಬ್ಬಿನ ಉಪ ಉತ್ಪನ್ನಗಳ ಲಾಭ ಕೊಡಿಸಲಾಗಿಲ್ಲ. ಅತಿವೃಷ್ಟಿ ಹಾನಿ ಸಂಬಂಧ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಮೀಸಲು ನಿಧಿಯಡಿ ಪರಿಹಾರ ವಿತರಣೆ ವ್ಯತ್ಯಾಸವಿದೆ ಎಂದರು ತೇಜಸ್ವಿ ಪಟೇಲ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts