More

    ಕಾರ್ಗಿಲ್ ಗೆಲುವಿನ ಹಿಂದಿದೆ ತ್ಯಾಗ, ಬಲಿದಾನ

    ದಾವಣಗೆರೆ : ಇಪ್ಪತ್ನಾಲ್ಕು ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಲು ದೇಶದ ನೂರಾರು ಯೋಧರು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು, ಆ ಯುದ್ಧದಲ್ಲಿ ಹೋರಾಡಿದ್ದ ಕನ್ನಡಿಗ ನವೀನ್ ನಾಗಪ್ಪ ಹೇಳಿದರು.
     ಪ್ರಸ್ತುತ ಬೆಂಗಳೂರಿನಲ್ಲಿ ರಕ್ಷಣಾ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಆಗಿರುವ ಅವರು, ನಗರದ ಬಿಐಇಟಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಆ ಯುದ್ಧದಲ್ಲಿ 527 ಯೋಧರು ಹುತಾತ್ಮರಾದರು, 1300 ಸೈನಿಕರು ಗಾಯಾಳುಗಳಾದರು. ಅವರ ಶೌರ್ಯ, ಪರಾಕ್ರಮದಿಂದಾಗಿ ‘ಆಪರೇಷನ್ ವಿಜಯ್’ ಯಶಸ್ವಿಯಾಯಿತು ಎಂದು ತಿಳಿಸಿದರು.
     ಹಿಮಾಚ್ಛಾದಿತವಾದ ಬೆಟ್ಟ ಪ್ರದೇಶದಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ನಡೆದ ಈ ಯುದ್ಧದಲ್ಲಿ ಶತ್ರು ಸೈನ್ಯಕ್ಕೆ ತಕ್ಕ ಪಾಠ ಕಲಿಸಲಾಯಿತು. ಪಾಯಿಂಟ್ 5140 ಹಾಗೂ ಪಾಯಿಂಟ್ 4875 ಮೇಲೆ ಭಾರತದ ಬಾವುಟ ಹಾರಿಸಲು ನಡೆದ ಹೋರಾಟವನ್ನು ಎಳೆ ಎಳೆಯಾಗಿ ವಿವರಿಸಿದರು.
     ಆ ಹೋರಾಟದಲ್ಲಿ 120 ಯೋಧರ ತಂಡವನ್ನು ಮುನ್ನಡೆಸಿದ್ದು, ಶತ್ರುಗಳ ಬಂಕರ್‌ಗಳನ್ನು ನಾಶ ಮಾಡಿದ್ದು, ಗ್ರೆನೇಡ್ ದಾಳಿಗೆ ಒಳಗಾಗಿದ್ದು ಸೇರಿ ತಮ್ಮ ಅನುಭವವನ್ನು ಹಂಚಿಕೊಂಡರು. ಸೇನೆಗೆ ಆಯ್ಕೆಯಾಗುವುದು ಸುಲಭವಲ್ಲ. ಅವರಲ್ಲಿ ನಾಯಕತ್ವ ಗುಣಗಳಿರಬೇಕು. ಎಂಥದೇ ಸನ್ನಿವೇಶವನ್ನಾದರೂ ಎದುರಿಸಲು ಸಿದ್ಧರಿರಬೇಕು ಎಂದರು.
     ಓದಿನಲ್ಲಿ ಅಂಕಗಳನ್ನು ಗಳಿಸುವುದು, ಡಿಸ್ಟಿಂಕ್ಷನ್, ಸಿಜಿಪಿಎ ಒಂದು ಹಂತದ ವರೆಗೆ ಮುಖ್ಯವಾಗುತ್ತವೆ. ಆದರೆ ಅದಕ್ಕಿಂತಲೂ ನಿಮ್ಮ ಮನೋಸ್ಥಿತಿ ಬಹಳ ಪ್ರಮುಖವಾಗುತ್ತದೆ. ದೃಢ ನಿರ್ಧಾರ, ಸ್ಪಷ್ಟತೆಯೊಂದಿಗೆ ಮುನ್ನುಗ್ಗಿದರೆ ಅವಕಾಶಗಳು ಸಾಕಷ್ಟಿವೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
     ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಪ್ರೇರೇಪಿಸುವ ನಾಯಕತ್ವ ಬೇಕಿದೆ ಎಂದು ತಿಳಿಸಿದರು. 1965ರ ಯುದ್ಧದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, 1971ರಲ್ಲಿ ಇಂದಿರಾ ಗಾಂಧಿ, 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವ ನೀಡಿದರು ಎಂದು ಸ್ಮರಿಸಿದರು. ಮಣಿಪುರ ಘಟನೆಯ ಬಗ್ಗೆ ಪ್ರಸ್ತಾಪಿಸಿ, ದೇಶವನ್ನು ಅಭದ್ರಗೊಳಿಸುವ ಪ್ರಯತ್ನಗಳು ನಡೆದಿದ್ದು ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
     ಪ್ರಾಚಾರ್ಯ ಎಚ್.ಬಿ. ಅರವಿಂದ್, ಡಾ.ಕೆ.ಎಸ್. ಬಸವರಾಜಪ್ಪ, ಮಲ್ಲಿಕಾರ್ಜುನ್, ಎ.ಜಿ. ಶಂಕರಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts