More

    ಮಕ್ಕಳ ಬಾಲ್ಯಕ್ಕೆ ಹೆಚ್ಚಿನ ಸಮಯ ನೀಡಿ

    ದಾವಣಗೆರೆ : ಪಾಲಕರು ತಮ್ಮ ಮಕ್ಕಳ ಬಾಲ್ಯಕ್ಕೆ ಹೆಚ್ಚಿನ ಸಮಯ ನೀಡಿದರೆ ಭವಿಷ್ಯದಲ್ಲಿ ವೃದ್ಧಾಶ್ರಮಕ್ಕೆ ಹೋಗುವ ಅವಕಾಶ ಇರುವುದಿಲ್ಲ ಎಂದು ದಾವಣಗೆರೆ ದಕ್ಷಿಣ ವಲಯದ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ಅಭಿಪ್ರಾಯಪಟ್ಟರು.
     ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವೇಕ್ ಪಾಲಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಮತ್ತು ಸಮಾಜದ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಿದರು.
     ಇಂದಿನ ದಿನಮಾನಗಳಲ್ಲಿ ಪಾಲಕರು ಕೆಲಸದ ಒತ್ತಡಗಳಿಂದ ಮಗುವಿನ ಆರೈಕೆ ಮಾಡುವಲ್ಲಿ ನಿರ್ಲಕ್ಷೃ ವಹಿಸುತ್ತಿರುವ ಪರಿಣಾಮ ಮಕ್ಕಳು ಹಾಗೂ ಪಾಲಕರ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಕೆಲಸದ ಒತ್ತಡದ ನಡುವೆಯೂ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಕಾರ್ಯವಾಗಬೇಕೆಂದರು.
     ಮಕ್ಕಳ ಆಂತರಿಕ ಕೌಶಲ ಗುರುತಿಸಿ ಹೆಚ್ಚಿನ ಪ್ರೊತ್ಸಾಹ ನೀಡುವ ಜತೆಗೆ ಅವರಲ್ಲಿನ ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಬೇಕು ಮತ್ತು ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
     ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ ಸಿಕ್ಕರೆ, ಅನೌಪಚಾರಿಕ ಶಿಕ್ಷಣ ಸಮಾಜದಿಂದಲೇ ಸಿಗಲಿದೆ. ಆದ್ದರಿಂದ ಮಕ್ಕಳಿಗೆ ಆಸ್ತಿ ಗಳಿಸಿಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ ಎಂದು ಕಿವಿಮಾತು ಹೇಳಿದರು.
     ಮಗುವಿನ ಪಾಲನೆಯಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿದ್ದು, ಪಾಲಕರು ಮಕ್ಕಳ ಅನಾರೋಗ್ಯಕ್ಕೆ ಭಯ ಪಡದೆ ವೈದ್ಯರ ಸಹಾಯ ಪಡೆಯಿರಿ ಎಂದು ಹೇಳಿದರು.
     ಸಂಶೋಧನಾ ಕೇಂದ್ರದ ನಿರ್ದೇಶಕ ಜಿ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಕೌಜಲಗಿ, ಡಾ. ರೇವಣ್ಣ, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts