More

    ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಎಪಿಎಂಸಿ

    ರಮೇಶ ಜಹಗೀರದಾರ್ ದಾವಣಗೆರೆ: ಒಂದು ಕಾಲಕ್ಕೆ ಕೋಟಿಗಳ ಲೆಕ್ಕದಲ್ಲಿ ವಹಿವಾಟು ನಡೆಸಿ ಶ್ರೀಮಂತ ಮಾರುಕಟ್ಟೆಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ದಾವಣಗೆರೆ ಎಪಿಎಂಸಿ ಈಗ ಆದಾಯ ಕುಸಿತದಿಂದ ಕಂಗೆಟ್ಟಿದೆ. ಮಾರುಕಟ್ಟೆ ಶುಲ್ಕದಲ್ಲಿ ಇಳಿಕೆಯಾಗಿದ್ದರಿಂದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ.

    ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಮಾರುಕಟ್ಟೆ ಸಮಿತಿಗೆ ಹಣಕಾಸಿನ ಹರಿವು ಕಡಿಮೆಯಾಗಿದೆ. ಅಭಿವೃದ್ಧಿಯ ಮಾತಿರಲಿ ಖರ್ಚು, ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದೂ ಕಷ್ಟಕರವಾಗಿದೆ.

    ಈ ಹಿಂದೆ 100 ರೂ. ವಹಿವಾಟು ನಡೆದರೆ 1.50 ರೂ. ಮಾರುಕಟ್ಟೆ ಶುಲ್ಕ ಬರುತ್ತಿತ್ತು. ಕಾಯ್ದೆ ತಿದ್ದುಪಡಿಯ ನಂತರ ಅದು ಕೇವಲ 35 ಪೈಸೆಗೆ ಇಳಿಕೆಯಾಗಿದೆ.

    ಸಮಿತಿಗೆ 1.50 ರೂ. ಸೆಸ್ ಬರುತ್ತಿದ್ದಾಗ ಅದರಲ್ಲಿ ಆವರ್ತ ನಿಧಿಗೆ 50 ಪೈಸೆ ಕೊಡಬೇಕಿತ್ತು. 30 ಪೈಸೆ ರಾಜ್ಯ ಸಂಚಿತ ನಿಧಿಗೆ, 5 ಪೈಸೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ, 1 ಪೈಸೆ ಕೃಷಿ ವಿವಿಗೆ, 10 ಪೈಸೆ ಸಾಫ್ಟ್‌ವೇರ್‌ಗೆ ಸೇರಿದಂತೆ ಒಟ್ಟು 96 ಪೈಸೆ ಸರ್ಕಾರಕ್ಕೆ ಹೋಗುತ್ತಿತ್ತು, ಸಮಿತಿಗೆ 54 ಪೈಸೆ ಉಳಿಯುತ್ತಿತ್ತು.

    ಈಗ ಬರುತ್ತಿರುವ 35 ಪೈಸೆಯಲ್ಲಿ 15 ಪೈಸೆ ಆವರ್ತ ನಿಧಿಗೆ ನೀಡಬೇಕು. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ 4 ಪೈಸೆ, ರೆಮ್ಸ್ ಸಂಸ್ಥೆಗೆ ವಹಿವಾಟು ಶುಲ್ಕ 2 ಪೈಸೆ ಕೊಡಬೇಕು. ಉಳಿದ 14 ಪೈಸೆಗಳಲ್ಲಿ ಪ್ರಾಂಗಣದಲ್ಲಿ ಮೂಲಸೌಕರ್ಯ, ಪ್ರಾಂಗಣ ನಿರ್ವಹಣೆ, ಸಮಿತಿಯ ಆಡಳಿತ ವೆಚ್ಚವನ್ನು ನಿರ್ವಹಿಸಬೇಕಿದೆ.

    ಕುಡಿವ ನೀರು, ವಿದ್ಯುತ್, ದೂರವಾಣಿ, ಸ್ವಚ್ಛತೆ, ಡೇಟಾ ಎಂಟ್ರಿ ಸಿಬ್ಬಂದಿ, ಸದಸ್ಯರ ಭತ್ಯೆ, ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ, ರಸ್ತೆ, ಗೋಡೌನ್‌ಗಳ ನಿರ್ವಹಣೆ ಮಾಡಬೇಕಿದೆ.

    ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಸಿಬ್ಬಂದಿ ಕಡಿತ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು 34ರಿಂದ 17ಕ್ಕೆ ಇಳಿಸಲಾಗಿದೆ. ಈ ಮೊದಲು 40 ಜನ ಸ್ವಚ್ಛತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈಗ ಕೇವಲ 30 ಮಂದಿ ಉಳಿದಿದ್ದಾರೆ.

    ಇದುವರೆಗೆ ಸಮಿತಿಗೆ ಎಪಿಎಂಸಿ ಯಾರ್ಡ್ ಅಲ್ಲದೇ ಇಡೀ ತಾಲೂಕಿನ ವ್ಯಾಪ್ತಿ ಇರುತ್ತಿತ್ತು. ಕಾಯ್ದೆ ತಿದ್ದುಪಡಿಯಿಂದಾಗಿ ಮಾರುಕಟ್ಟೆ ಆವರಣಕ್ಕೆ ಸೀಮಿತವಾಗಿದೆ. ಮಳಿಗೆಗಳಿಂದ ಬರುವ (ವರ್ಷಕ್ಕೆ) 1 ಕೋಟಿ ರೂ. ಬಾಡಿಗೆ ಸ್ವಲ್ಪ ಕೈಹಿಡಿಯುತ್ತದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಅಸ್ತಿತ್ವದ ಪ್ರಶ್ನೆ ಎದುರಾಗಲಿದೆ.

    ಆದಾಯ ಕುಸಿತ: ಈ ವರ್ಷದ ಏಪ್ರಿಲ್‌ನಿಂದ ಜುಲೈವರೆಗೆ 4 ತಿಂಗಳಲ್ಲಿ 4.02 ಮಾರುಕಟ್ಟೆ ಶುಲ್ಕ ಬಂದಿತ್ತು. ಆಗಸ್ಟ್‌ನಲ್ಲಿ 28 ಲಕ್ಷ ರೂ, ಸೆಪ್ಟೆಂಬರ್‌ನಲ್ಲಿ 14 ಲಕ್ಷ, ಅಕ್ಟೋಬರ್‌ನಲ್ಲಿ ಕೇವಲ 10 ಲಕ್ಷ ರೂ. ಸಂದಾಯವಾಗಿದೆ.

    ತಿಂಗಳಿಗೆ ಸರಾಸರಿ 1 ಕೋಟಿಯಷ್ಟು ಬರುತ್ತಿದ್ದ ಕಡೆ ಈಗ 10-12 ಲಕ್ಷ ಮಾತ್ರ ಸಿಗುತ್ತಿದೆ. 2019-20ನೇ ಸಾಲಿನಲ್ಲಿ ಒಟ್ಟಾರೆ 12.91 ಕೋಟಿ ಶುಲ್ಕ ಸಂಗ್ರಹವಾಗಿತ್ತು.

    ತರಕಾರಿ ಮತ್ತು ಹಣ್ಣು ವಹಿವಾಟಿನಿಂದ ಬರುತ್ತಿದ್ದ ಬಳಕೆದಾರರ ಶುಲ್ಕವೂ ಕಡಿಮೆಯಾಗಿದೆ. ಈ ಮೊದಲು 1 ರೂ. ಇದ್ದ ಶುಲ್ಕವೂ 35 ಪೈಸೆಗೆ ಇಳಿಕೆಯಾಗಿದೆ. ಕಳೆದ ಏಪ್ರಿಲ್‌ನಿಂದ ಜುಲೈವರೆಗೆ 12.58 ಲಕ್ಷ ರೂ. ಬಂದರೆ, ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ 10.87 ಲಕ್ಷ ಮಾತ್ರ ಬಳಕೆದಾರರ ಶುಲ್ಕ ಸಂಗ್ರಹವಾಗಿದೆ.

    ಮಾರುಕಟ್ಟೆ ಶುಲ್ಕ ಕಡಿಮೆಯಾಗಿದ್ದರಿಂದ ಬಹಳ ತೊಂದರೆಯಾಗಿದೆ. ಮೊದಲು ಒಂದು ತಿಂಗಳಿಗೆ ಬರುತ್ತಿದ್ದಷ್ಟು ಆದಾಯ ಈಗ ಒಂದು ವರ್ಷಕ್ಕೆ ಬಂದರೆ ಹೆಚ್ಚು. ಈ ಆದಾಯದಿಂದ ಎಪಿಎಂಸಿ ನಿರ್ವಹಣೆ ಕಷ್ಟಕರವಾಗಿದೆ.
    > ಎಸ್.ಕೆ.ಚಂದ್ರಶೇಖರ್ ದಾವಣಗೆರೆ ಎಪಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts