More

    ಪರಿಕರ ಖರೀದಿ ಪ್ರಕರಣ, ತನಿಖೆಗೆ ವಹಿಸಿ

    ದಾವಣಗೆರೆ: ಅವ್ಯವಹಾರ ಆರೋಪಕ್ಕೊಳಗಾದ ಕರೊನಾ ಪರಿಕರಗಳ ಖರೀದಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹಿಸಿ ಅಖಿಲ ಭಾರತ ಯುವ ಜನ ಫೆಡರೇಷನ್‌ನ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ಜಯದೇವ ವೃತ್ತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಅಲ್ಲಿಂದ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ವೆಂಟಿಲೇಟರ್, ಪಿಪಿಇ ಕಿಟ್, ಮುಖಗವಸು, ಆಮ್ಲಜನಕದ ಸಿಲಿಂಡರ್ ಖರೀದಿ, ಕೋವಿಡ್ ಪರೀಕ್ಷೆ ಹಾಗೂ ಸೋಂಕಿತರ ದಿನವಹಿ ಖರ್ಚಿನಲ್ಲಿ ಅಗತ್ಯಕ್ಕಿಂತ ಅಧಿಕ ಹಣ ಬಳಸಲಾಗಿದೆ ಎಂಬುದಾಗಿ ವಿ ಪಕ್ಷ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ತನಿಖೆಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

    ಬಾಕಿ ಶಿಷ್ಯವೇತನಕ್ಕಾಗಿ ಪ್ರತಿಭಟಿಸುತ್ತಿರುವ ವೈದ್ಯ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು. ದಾದರ್‌ನಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸದ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳನ್ನು ಬಂಧಿಸಬೇಕು. ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದಿಂದ ಬಾಡಾ ಕ್ರಾಸ್ ಬೈಪಾಸ್‌ವರೆಗೆ ನೂತನ ಮಾದರಿಯ ಬೀದಿ ದೀಪ, ಎಲ್ಲ ತಿರುವುಗಳಿಗೂ ನೂತನ ಹಂಪ್ಸ್‌ಗಳನ್ನು ಅಳವಡಿಸಬೇಕು. ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೆ ಘೋಷಿತ 5 ಸಾವಿರ ರೂ. ಸಹಾಯಧನ ನೀಡಬೇಕೆಂದು ಆಗ್ರಹಿಸಿದರು.

    ಸಂಘದ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಕಾರ್ಯದರ್ಶಿ ಎ.ತಿಪ್ಪೇಶಿ, ಉಪಾಧ್ಯಕ್ಷರಾದ ಗದಿಗೇಶ್ ಪಾಳೇದ, ಫಜುಲುಲ್ಲಾ, ಇರ್ಫಾನ್, ಸಹ ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಮಂಜುನಾಥ ದೊಡ್ಡಮನೆ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಹರಳಯ್ಯ ನಗರ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts