More

    ಏಡ್ಸ್ ನಿರ್ಮೂಲನೆಗೆ ಭಾರತ ಶ್ರಮ

    ದಾವಣಗೆರೆ: ದೇಶದಲ್ಲಿ 2030ರ ವೇಳೆಗೆ ಎಚ್‌ಐವಿ ಹಾಗೂ ಏಡ್ಸ್ ರೋಗವನ್ನು ನಿರ್ಮೂಲನೆ ಮಾಡಲು ಭಾರತ ಮಹತ್ತರವಾಗಿ ಶ್ರಮಿಸುತ್ತಿದೆ ಎಂದು ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಐಸಿಟಿಸಿ ಆಪ್ತಸಮಾಲೋಚಕ ಪ್ರದೀಪ್‌ಕುಮಾರ್ ಹೇಳಿದರು.

    ನಗರದ ಎ.ಆರ್.ಜಿ. ಕಾಲೇಜಿನ ರೆಡ್ ರಿಬ್ಬನ್ ಕ್ಲಬ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಚ್.ಐ.ವಿ. ಹಾಗೂ ಏಡ್ಸ್ ಮತ್ತು ಸ್ವಯಂ ಪ್ರೇರಿತ ರಕ್ತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಶದ ಜನಸಂಖ್ಯೆಗೆ ಎಚ್‌ಐವಿ ಹಾಗೂ ಏಡ್ಸ್ ಗಂಭೀರವಾದ ಆರೋಗ್ಯ ಸವಾಲುಗಳನ್ನು ಒಡ್ಡುತ್ತಿದ್ದು, ಈ ಕುರಿತು ಯುವಜನತೆ ಜಾಗೃತರಾಗಬೇಕು ಹಾಗೂ ಇತರರಿಗೂ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಜಗತ್ತಿನಾದ್ಯಂತ ರಕ್ತದಾನಕ್ಕೆ ಬಹಳ ಮಹತ್ವವಿದೆ. ಒಂದು ಜೀವ ಉಳಿಸುವ ಶಕ್ತಿ ರಕ್ತದಾನಕ್ಕಿದ್ದು, ಯುವಸಮೂಹ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

    ಪ್ರಾಚಾರ್ಯ ಡಾ.ಜಿ.ಬಿ. ಬೋರಯ್ಯ ಮಾತನಾಡಿ, ಯುವ ಸಮುದಾಯ ನೈತಿಕತೆ ರೂಢಿಸಿಕೊಳ್ಳಬೇಕು. ನಿಮ್ಮ ಜತೆಗೆ ಕುಟುಂಬ ಮತ್ತು ಜಗತ್ತು ಇದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

    ಐಕ್ಯೂಎಸಿ ಸಂಚಾಲಕಿ ಪ್ರೊ. ಅನಿತಾಕುಮಾರಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ಎಚ್.ಆರ್. ತಿಪ್ಪೇಸ್ವಾಮಿ, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರೊ.ರಮೇಶ್ ಪೂಜಾರ್, ಉದ್ಯೋಗ ಭರವಸೆ ಕೋಶದ ಸಂಚಾಲಕರಾದ ಪ್ರೊ. ಪಿ.ರಶ್ಮಿ, ಪ್ರೊ. ಆನಂದ್, ಡಾ. ಚಮನ್‌ಸಾಬ್, ಬೇಬಿ ಅಮಿನಾ ಇದ್ದರು.

    ಏಡ್ಸ್ ಅರಿವು ಜಾಗೃತಿಯ ಪ್ರಬಂಧ ಸ್ಪರ್ಧೆಯಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿ ಹನುಮಂತಪ್ಪ ಪ್ರಥಮ, ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಪಿ. ಪುಷ್ಪ ದ್ವಿತೀಯ ಹಾಗೂ ಮೇಘನಾ ಮಂಜುನಾಥ್ ತೃತೀಯ ಬಹುಮಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts