More

    ಅತ್ತೆಯನ್ನು ಕೊಂದ ಸೊಸೆ ಜೈಲುಪಾಲು!

    ಬೆಂಗಳೂರು: ಅಡಿಕೆ ಕುಟ್ಟಲು ಬಳಸುವ ಕುಟಾಣಿಯಿಂದ ಹಲ್ಲೆ ನಡೆಸಿ ಅತ್ತೆಯನ್ನೆ ಕೊಂದು ದರೋಡೆಕೋರರ ಕೃತ್ಯವೆಂದು ಕತೆಕಟ್ಟಿದ್ದ ಮಹಿಳೆ ಜೈಲು ಪಾಲಾಗಿದ್ದಾಳೆ.

    ಬ್ಯಾಟರಾಯನಪುರದ ಸೌಂದರ್ಯಾ ಬಂಧಿತ ಸೊಸೆ. ಕಳೆದ ಮಂಗಳವಾರ (ಫೆ.18)ರಂದು ಸಂಜೆ 4 ಗಂಟೆಗೆ ತನ್ನ ಅತ್ತೆ ರಾಜಮ್ಮ (60) ಎಂಬುವರನ್ನು ಹತ್ಯೆ ಮಾಡಿದ್ದರು. ಶಂಕೆ ಮೇರೆಗೆ ಸೌಂದರ್ಯಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಮಾರ್ ಮತ್ತು ಸೌಂದರ್ಯಾ ದಂಪತಿಗೆ 10 ತಿಂಗಳ ಮಗುವಿದ್ದು, ತಾಯಿ ರಾಜಮ್ಮ ಜತೆ ಬ್ಯಾಟರಾಯನಪುರದ 5ನೇ ಕ್ರಾಸ್​ನ ಬಾಡಿಗೆಯಲ್ಲಿ ವಾಸಿಸುತ್ತಿದ್ದರು. ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲಿಯೇ ಇರುತ್ತಿದ್ದರು. ಫೆ.18ರಂದು ರಾಜಮ್ಮಗೆ ಅನಾರೋಗ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪುತ್ರ ಕುಮಾರ್ ಪರಿಚಯಸ್ಥ ವೈದ್ಯರಿಗೆ ಕರೆ ಮಾಡಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ. ಹಾಗಾಗಿ ಸಂಜೆ 4.30 ಗಂಟೆಗೆ ದ್ವಿಚಕ್ರವಾಹನದಲ್ಲಿ ಟಿ.ಆರ್.ಮಿಲ್ ಸಮೀಪದಲ್ಲಿರುವ ವೈದ್ಯರ ಭೇಟಿಗಾಗಿ ತೆರಳುತ್ತಿದ್ದರು.ಆಗ ಪತ್ನಿ ಹಾಗೂ ನೆರೆ ಮನೆಯವರಿಂದ ಕರೆ ಬಂದಿದ್ದು, ಬೇಗ ಮನೆಗೆ ಬರುವಂತೆ ಸೂಚಿಸಿದ್ದಾರೆ. ತಕ್ಷಣ ಕುಮಾರ್ ಮನೆಗೆ ವಾಪಸ್ ಆಗಿದ್ದು, ತನ್ನ ತಾಯಿ ರಾಜಮ್ಮ ಅವರು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆ ವೇಳೆಗೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.

    ದರೋಡೆಕೋರರ ಕತೆ ಕಟ್ಟಿದಳು: ಸಂಜೆ 4 ಗಂಟೆಗೆ ಅತ್ತೆಯ ಜತೆ ಮನೆಯಲ್ಲಿದ್ದಾಗ ಅಪರಿಚಿತನೋರ್ವ ಮನೆಗೆ ನುಗ್ಗಿದ್ದು, ನನ್ನ ಕೈಗಳನ್ನು ಹಿಡಿದು ಕೊಠಡಿಯೊಳಗೆ ಎಳೆದೊಯ್ಯಲು ಯತ್ನಿಸಿದ. ಕೂಡಲೇ ಆತನ ಕೈಯಿಂದ ಬಿಡಿಸಿಕೊಂಡು ಮನೆಯಿಂದ ಹೊರಗೆ ಓಡಿ ಬಂದು, ರಕ್ಷಣೆಗಾಗಿ ಪಕ್ಕದ ಮನೆಯ ಮಹಿಳೆಯನ್ನು ಕರೆದೆ. ಆಕೆಯೊಂದಿಗೆ ಮನೆಗೆ ಬಂದು ನೋಡಿದಾಗ ಅತ್ತೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಡಿಕೆ ಕುಟ್ಟಲು ಬಳಸುವ ಕಬ್ಬಿಣದ ರಾಡ್​ನಿಂದ ತಲೆಗೆ ಬಲವಾಗಿ ಹೊಡೆದು ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಪತಿಯ ಮುಂದೆ ಹೇಳಿದ್ದಳು.

    ಬೆರಳಚ್ಚು ನೀಡಿದ ಸುಳಿವು!: ಕುಮಾರ್ ಮತ್ತು ಆತನ ಪತ್ನಿ ಸೌಂದರ್ಯ ಹಾಗೂ ಸ್ಥಳೀಯ ನಿವಾಸಿಗಳಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಲಾಗಿತ್ತು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಮೂಲಕ ಘಟನಾ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಹತ್ಯೆಗೆ ಬಳಸಿದ್ದ ಕಬ್ಬಿಣದ ರಾಡ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೌಂದರ್ಯಾ ಮೇಲೆ ಶಂಕೆ ವ್ಯಕ್ತವಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಕ್ರಮ ಸಂಬಂಧ ಶಂಕೆ?: ಸಾಕ್ಷ್ಯ ಪ್ರಕಾರ ಕೃತ್ಯದಲ್ಲಿ ಮತ್ತೋರ್ವ ವ್ಯಕ್ತಿ ಕೃತ್ಯದಲ್ಲಿ ಶಾಮೀಲಾಗಿದ್ದಾನೆ. ಸೌಂದರ್ಯಾ ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ತನ್ನ ಪ್ರಿಯಕರನ ಜತೆಗೂಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿತಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts