More

    ಧರ್ಮಸ್ಥಳದಲ್ಲಿ ಗೋವು ಕಾರು-ರಿಕ್ಷಾ

    ಬೆಳ್ತಂಗಡಿ: ಪಾರಂಪರಿಕ ಜೀವನ ಶೈಲಿಯನ್ನು ಆಧುನಿಕ ತಂತ್ರಜ್ಞಾನದ ಜತೆ ಮಿಳಿತಗೊಳಿಸಿ ಜನರಿಗೆ ನೆನಪಿಸುವ ಕಾರ್ಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿದೆ. ಎತ್ತಿನಗಾಡಿಗಳನ್ನು ಆಕರ್ಷಕವಾಗಿ ರೂಪಿಸಿರುವುದು ಸದ್ಯದ ಸರದಿ.

    ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಸರಸ್ನೇಹಿ ಕಲ್ಪನೆಯೊಂದಿಗೆ ಹರ್ಷೇಂದ್ರ ಕುಮಾರ್ ಸಲಹೆಯಂತೆ ಕಾರು ಮ್ಯೂಸಿಯಂ ನೋಡಿಕೊಳ್ಳುವ ದಿವಾಕರ್ ಅವರ ತಂಡ ಪ್ರಾಯೋಗಿಕವಾಗಿ ವಾಹನಗಳ ಬಾಡಿಯನ್ನು ಅಭಿವೃದ್ಧಿಪಡಿಸಿ ಗೋವು ಗೂಡ್ಸ್ ರಿಕ್ಷಾ ಮತ್ತು ಗೋವು ಕಾರನ್ನು ತಯಾರಿಸಿದೆ.

    ಪೂಜಾ ಸಾಮಗ್ರಿ ಒಯ್ಯುವ ವಾಹನ: ಗೂಡ್ಸ್ ರಿಕ್ಷಾದ ಮುಂಭಾಗ ತೆಗೆದು ಹಿಂಭಾಗ ಉಳಿಸಿಕೊಂಡು ಗೋವು ಗೂಡ್ಸ್ ರಿಕ್ಷಾ ತಯಾರಿಸಲಾಗಿದೆ. ಇದನ್ನು ಪೊಂಗನೂರು ತಳಿಯ ಬಸವ ಎಳೆಯುತ್ತದೆ. ಬಸವನಿಗೆ ಆಯಾಸವಾಗದಂತೆ ಹಗುರ ಅನುಭವವಾಗಲು ಗಾಡಿಗೆ ಟೈರ್, ಹೈಡ್ರಾಲಿಕ್ ಬ್ರೇಕ್, ಪಾಕಿರ್ಂಗ್ ಜ್ಯಾಕ್ ಅಳವಡಿಸಲಾಗಿದೆ. ಈಶ್ವರನ ವಾಹನ ನಂದಿ. ಆ ಕಲ್ಪನೆಯಲ್ಲಿ ತಯಾರಾದ ಗೋವು ಗೂಡ್ಸ್ ರಿಕ್ಷಾ ದೇವರಿಗೆ ಪೂಜಾ ಸಾಮಗ್ರಿ ಒಯ್ಯುವ (ಉಗ್ರಾಣದಿಂದ ದೇವಸ್ಥಾನಕ್ಕೆ) ವಾಹನವಾಗಿದೆ.

    ಓಂಗೋಲ್ ತಳಿಯ ಎತ್ತು: ಹಳೇ ಅಂಬಾಸಿಡರ್ ಕಾರಿನ ಹಿಂಭಾಗ ಉಳಿಸಿಕೊಂಡು, ಮುಂಭಾಗದಲ್ಲಿ ಎರಡು ಓಂಗೋಲ್ ತಳಿಯ ಎತ್ತುಗಳು ಎಳೆಯುವಂತೆ ರಚಿಸಲಾಗಿರುವುದೇ ಗೋವು ಕಾರು. ಬ್ರೇಕ್, ಚಕ್ರಗಳಿಗೆ ವಿಭಿನ್ನ ವಿನ್ಯಾಸದ ವ್ಹೀಲ್ ಕ್ಯಾಪ್ ಅಳವಡಿಸಲಾಗಿದೆ. ಮಂಜೂಷಾ ಕಾರು ಸಂಗ್ರಹಾಲಯದ ಸಿಬ್ಬಂದಿ ಮತ್ತು ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಶ್ರಮ ಇದರಲ್ಲಿದೆ.

    ಆನಂದ್ ಮಹೀಂದ್ರಾ ಮೆಚ್ಚುಗೆ: ಹೊಸ ಶೋಧಗಳ ಬಗ್ಗೆ ಸದಾ ಪ್ರತಿಕ್ರಿಯಿಸುವ ಮಹೀಂದ್ರಾ ಕಂಪನಿ ಚೇರ್ಮನ್ ಆನಂದ್ ಮಹೀಂದ್ರಾ, ಧರ್ಮಸ್ಥಳದ ಈ ವಿಶೇಷ ವಾಹನದ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ ಲಘುಧಾಟಿಯಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ‘ಇಷ್ಟು ಕಡಿಮೆ ಖರ್ಚಿನ ಈ ನವೀಕರಿಸಬಹುದಾದ ಇಂಧನ ಚಾಲಿತ ಕಾರನ್ನು ಟೆಲ್ಸಾ (ವಿದ್ಯುತ್‌ಚಾಲಿತ ಕಾರು ಕಂಪನಿ) ಕೂಡ ಸರಿಗಟ್ಟುತ್ತದೆ ಎಂದು ನನಗನ್ನಿಸುವುದಿಲ್ಲ. ನೀವು ಮಿಥೇನ್ (ಸಗಣಿಯಿಂದ ಉತ್ಪಾದಿಸಬಹುದಾದ ಇಂಧನ) ಗಣನೆಗೆ ತೆಗೆದುಕೊಂಡರೂ ಎಮಿಷನ್ ಲೆವೆಲ್‌ನ ಬಗ್ಗೆ ಖಚಿತತೆ ಇಲ್ಲ!’ ಎಂದು ಟ್ವೀಟ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts